ಟಿಎಂಸಿ ಸೇರಿದ ನೇತಾಜಿ ಸುಭಾಷಚಂದ್ರ ಬೋಸ್ ಮೊಮ್ಮಗ ಚಂದ್ರಕುಮಾರ ಬೋಸ್

ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ರಾಜಕೀಯ ಬೆಳವಣಿಗೆಗಳು ವೇಗ ಪಡೆದುಕೊಂಡಿವೆ. ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷಚಂದ್ರ ಬೋಸ್ ಅವರ ಮೊಮ್ಮಗ (Grandnephew) ಚಂದ್ರಕುಮಾರ ಬೋಸ್ ಅವರು ತೃಣಮೂಲ ಕಾಂಗ್ರೆಸ್ (TMC) ಸೇರ್ಪಡೆಯಾಗಿದ್ದಾರೆ.
2023ರ ಸೆಪ್ಟೆಂಬರ್‌ನಲ್ಲಿ ಸದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಬಿಜೆಪಿಯನ್ನು ತೊರೆದಿದ್ದ ಬೋಸ್, ಈಗ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದ ಕೈ ಹಿಡಿದಿದ್ದಾರೆ.
ಸುಭಾಷಚಂದ್ರ ಬೋಸ್ ಅವರ ಹಿರಿಯ ಸಹೋದರ ಶರತ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ ಬೋಸ್‌   ಟಿಎಂಸಿ ಸೇರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಅಜ್ಜ ನೇತಾಜಿಯವರ ಉದಾತ್ತ ಆದರ್ಶಗಳನ್ನು ಬಿಜೆಪಿ ಗಾಳಿಗೆ ತೂರುತ್ತಿದೆ ಎಂದು ಆರೋಪಿಸಿದರು.
“ನಾನು ಈ ಬಾರಿ ಮತ್ತೆ ತಪ್ಪು ಮಾಡಲು ಬಯಸಲಿಲ್ಲ. ಸುದೀರ್ಘ ಚಿಂತನೆ ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯವೈಖರಿಯನ್ನು ಗಮನಿಸಿದ ನಂತರ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ತೃಣಮೂಲ ಕಾಂಗ್ರೆಸ್ ಅಂತರ್ಗತ (Inclusive) ಮತ್ತು ಜಾತ್ಯತೀತ ರಾಜಕಾರಣವನ್ನು ಅನುಸರಿಸುತ್ತಿದೆ. ನನ್ನ ಸಿದ್ಧಾಂತವೂ ಇದೇ ಆಗಿದೆ,” ಎಂದು ಬೋಸ್ ಹೇಳಿದರು.
“ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಬಿಜೆಪಿ, ಅಧಿಕಾರಕ್ಕಾಗಿ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ ಮತ್ತು ಸಮಾಜವನ್ನು ವಿಭಜಿಸುತ್ತಿದೆ,” ಎಂದು ಅವರು ದೂರಿದ್ದಾರೆ.
ಚುನಾವಣಾ ರಾಜಕೀಯ ಮತ್ತು ಹಿನ್ನೆಲೆ
ಚಂದ್ರಕುಮಾರ ಬೋಸ್ ಅವರು ಈ ಹಿಂದೆ 2016 ಮತ್ತು 2019ರ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನಪ್ಪಿದ್ದರು. ಅಂದಿನಿಂದಲೂ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದ ಅವರು, ಧರ್ಮದ ಆಧಾರದ ಮೇಲೆ ಮತದಾರರನ್ನು ವಿಭಜಿಸುವ ರಾಜಕೀಯದೊಂದಿಗೆ ತಮಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement