ದೀದಿಗೆ ಶಾಕ್‌ ಮೇಲೆ ಶಾಕ್‌ ; ಹೊರಬಿತ್ತು ಎನ್‌ಡಿಎಗೆ ಬೆಂಬಲ ಸೂಚಿಸಿದ 19 ಟಿಎಂಸಿ ಸಂಸದರ ಪಟ್ಟಿ ; ಯಾರೆಲ್ಲ ಇದ್ದಾರೆ ಗೊತ್ತೆ ?

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗಿನ ಭಿನ್ನಮತ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಲೋಕಸಭೆಯಲ್ಲಿಯೂ ಪಕ್ಷವು ಇಬ್ಬಾಗವಾಗುವ ಹಂತಕ್ಕೆ ಬಂದು ತಲುಪಿದೆ. ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಬಹಿರಂಗವಾಗಿಯೇ ಬಂಡಾಯ ಎದ್ದಿರುವ 19 ಲೋಕಸಭಾ ಸಂಸದರ ಹೆಸರುಗಳು ಈಗ ಹೊರಬಿದ್ದಿದ್ದು, ಇವರೆಲ್ಲರೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಹಿ ಮಾಡಿದ ಪತ್ರವನ್ನು ರವಾನಿಸಿದ್ದಾರೆಎಂದು ಹೇಳಲಾಗಿದೆ.
ಪಕ್ಷದ 28 ಲೋಕಸಭಾ ಸಂಸದರಲ್ಲಿ ಕೇವಲ ಒಂಬತ್ತು ಮಂದಿ ಮಾತ್ರ ಬಂಡಾಯ ಪಾಳೆಯದಿಂದ ಹೊರಗುಳಿದಿದ್ದಾರೆ, ಆದರೂ ಕೆಲವು ಸದಸ್ಯರ ನಿಲುವುಗಳು ಸ್ಪಷ್ಟವಾಗಿಲ್ಲ. ಲೋಕಸಭೆಯಲ್ಲಿ ಒಟ್ಟು 28 ಸದಸ್ಯರನ್ನು ಹೊಂದಿರುವ ಟಿಎಂಸಿ, ಈ ಬಂಡಾಯದಿಂದಾಗಿ ಕೆಳಮನೆಯಲ್ಲಿ ಬಹುತೇಕ ಇಬ್ಭಾಗವಾಗುವ ಭೀತಿಯನ್ನು ಎದುರಿಸುತ್ತಿದೆ.
ಬಂಡಾಯವೆದ್ದ ಪ್ರಮುಖ ನಾಯಕರು ಯಾರು?
ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಬಂಡಾಯ ಸಂಸದರ ಪಟ್ಟಿಯಲ್ಲಿ ಹಿರಿಯ ನಾಯಕಿ ಕಕೋಲಿ ಘೋಷ್ ದಸ್ತಿದಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಬಾರಾಸತ್ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಇವರು, ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಅತ್ಯಂತ ಆಪ್ತರಾಗಿದ್ದರು. ಇವರನ್ನು ಹೊರತುಪಡಿಸಿ, ಜಾದವ್‌ಪುರ ಸಂಸದೆ ಸಾಯೋನಿ ಘೋಷ್ ಮತ್ತು ಬಹರಂಪುರ ಸಂಸದ ಯೂಸುಫ್ ಪಠಾಣ್ ಕೂಡ  ಸಹಿ ಹಾಕಿದ ಲೋಕಸಭಾ ಸದಸ್ಯರ ಪಟ್ಟಿಯಲ್ಲಿದ್ದಾರೆ.
ಅಲ್ಲದೆ, ಬಿರ್ಭೂಮ್ ಸಂಸದೆ ಶತಾಬ್ದಿ ರಾಯ್, ಮೇದಿನಿಪುರ ಸಂಸದೆ ಜೂನ್ ಮಾಲಿಯಾ ಮತ್ತು ಹೂಗ್ಲಿ ಸಂಸದೆ ರಚನಾ ಬ್ಯಾನರ್ಜಿ ಕೂಡ ಮಮತಾ ವಿರುದ್ಧದ ಪತ್ರಕ್ಕೆ ಸಹಿ ಹಾಕಿದ ಪ್ರಮುಖ ಸಂಸದರಲ್ಲಿ ಸೇರಿದ್ದಾರೆ.
ಲೋಕಸಭಾ ಸದಸ್ಯರಾದ ಕಾಕೋಲಿ ಘೋಷ್ ದಸ್ತಿದಾರ, ಶತಾಬ್ದಿ ರಾಯ್, ಬಾಪಿ ಹಲ್ದರ್, ಡಾ.ಶರ್ಮಿಳಾ ಸರ್ಕಾರ್, ಪ್ರಸೂನ್ ಬಂದೋಪಾಧ್ಯಾಯ, ಜಗದೀಶ್ ಬರ್ಮಾ ಬಸುನಿಯಾ, ಅಸಿತಕುಮಾರ ಮಲ್, ಅರೂಪ್ ಚಕ್ರವರ್ತಿ, ರಚನಾ ಬ್ಯಾನರ್ಜಿ, ಸಾಯೋನಿ ಘೋಷ್, ಖಲೀಲೂರ್ ರೆಹಮಾನ್, ಅಬು ತಾಹೆರ್ ಖಾನ್, ಯೂಸುಫ್ ಪಠಾಣ್, ಮಿತಾಲಿ ಬಾಗ್, ಮಾಲಾ ರಾಯ್, ಕಲಿಪದ ಸೊರೆನ್, ದೀಪಕ ಅಧಿಕಾರಿ, ಜೂನ್ ಮಾಲಿಯಾ ಪಾರ್ಥ ಭೌಮಿಕ್ ಅವರು ಈಗ ಹೊರಬಿದ್ದಿರುವ ಸಹಿ ಹಾಕಿದವರ ಪಟ್ಟಿಯಲ್ಲಿ ಸೇರಿದ್ದಾರೆ.
ಮಮತಾ ಪರ ನಿಂತ ಶತ್ರುಘ್ನ ಸಿನ್ಹಾ
ಈ ಬಂಡಾಯ ಗುಂಪಿನಲ್ಲಿ ಹಿರಿಯ ನಟ ಹಾಗೂ ಸಂಸದ ಶತ್ರುಘ್ನ ಸಿನ್ಹಾ ಅವರ ಹೆಸರೂ ಇದೆ ಎಂಬ ವದಂತಿಗಳು ಹರಡಿದ್ದವು. ಆದರೆ ಅವರ ಆಪ್ತ ಮೂಲಗಳು ಇದನ್ನು ತಳ್ಳಿಹಾಕಿವೆ. “ಕಷ್ಟದ ಸಮಯದಲ್ಲಿ ನಾನು ಮಮತಾ ಬ್ಯಾನರ್ಜಿ ಅವರನ್ನು ಬಿಟ್ಟು ಹೋಗುವುದಿಲ್ಲ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಸೋತು ನಾನು ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾಗ ಅವರು ನನ್ನ ಪರವಾಗಿ ನಿಂತಿದ್ದರು,” ಎಂದು ಶರ್ತುಘ್ನ ಸಿನ್ಹಾ ಹೇಳಿದ್ದಾರೆ.
“ಟಿಎಂಸಿ ರೆಬೆಲ್ ಗುಂಪಿಗೆ ಸೇರುವಂತೆ ನನಗೆ ಆಹ್ವಾನ ನೀಡಿದವರಿಗೆ ನಾನು ಕೃತಜ್ಞನಾಗಿದ್ದೇನೆ. ಆದರೆ ನನ್ನ ತತ್ವದ ಪ್ರಕಾರ ಈ ಕಷ್ಟದ ಸಮಯದಲ್ಲಿ ನಾನು ಮಮತಾ ಬ್ಯಾನರ್ಜಿ ಅವರ ಜೊತೆಗೇ ಇರಬೇಕು. ಸದ್ಯಕ್ಕಂತೂ ನಾನು ನನ್ನ ಹಾದಿಯನ್ನು ಬದಲಾಯಿಸುವುದಿಲ್ಲ,” ಎಂದು ಸಿನ್ಹಾ ಸ್ಪಷ್ಟಪಡಿಸಿದ್ದಾರೆ.
ಕಲ್ಯಾಣ ಬ್ಯಾನರ್ಜಿ ಅಂತಿಮ ಎಚ್ಚರಿಕೆ
ಪಕ್ಷದಲ್ಲಿ ಉದ್ಭವಿಸಿರುವ ಈ ತೀವ್ರ ಬಿಕ್ಕಟ್ಟಿಗೆ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ ಬ್ಯಾನರ್ಜಿ ಅವರೇ ಕಾರಣ ಎಂದು ಬಹುತೇಕ ಸಂಸದರು ದೂಷಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಮಮತಾ ಅವರ ಪರಮಾಪ್ತ ಹಾಗೂ ಹಿರಿಯ ಟಿಎಂಸಿ ನಾಯಕ ಕಲ್ಯಾಣ ಬ್ಯಾನರ್ಜಿ ಅವರು ಮಮತಾ ಬ್ಯಾನರ್ಜಿ ಅವರಿಗೆ ಅನಿರೀಕ್ಷಿತ ಎಚ್ಚರಿಕೆಯನ್ನು (Ultimatum) ನೀಡಿದ್ದಾರೆ. ಅಭಿಷೇಕ ಬ್ಯಾನರ್ಜಿ ಅವರದ್ದು “ಸ್ಥಿರವಿಲ್ಲದ ಮನಸ್ಥಿತಿ” ಎಂದು ಅವರು ವಾಗ್ದಾಳಿ ನಡೆಸಿದ್ದು, “ನನ್ನ ಮತ್ತು ಅಭಿಷೇಕ ನಡುವೆ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.
ಕಲ್ಯಾಣ ಬ್ಯಾನರ್ಜಿ ಸುದ್ದಿಗಾರರೊಂದಿಗೆ ಮಾತನಾಡಿ, “ಅಭಿಷೇಕ ಬ್ಯಾನರ್ಜಿ ಅವರನ್ನು ಎಲ್ಲಾ ನಾಯಕತ್ವದ ಹುದ್ದೆಗಳಿಂದ ಮುಕ್ತಗೊಳಿಸಿ, ಕೇವಲ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನಾಗಿ ಉಳಿಸಿದರೆ ಮಾತ್ರ ನಾನು ಪಕ್ಷದಲ್ಲಿ ಇರುತ್ತೇನೆ,” ಎಂದು ನೇರವಾಗಿಯೇ ಸವಾಲು ಹಾಕಿದ್ದಾರೆ.
ಸಂದಿಗ್ಧತೆಯಲ್ಲಿ ದೀದಿ
2026 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎದುರಾದ ಸೋಲಿನ ನಂತರ ರಾಜ್ಯ ವಿಧಾನಸಭೆಯಲ್ಲಿ ಆರಂಭವಾಗಿದ್ದ ಭಿನ್ನಮತ ಈಗ ಲೋಕಸಭೆಗೂ ವ್ಯಾಪಿಸಿದ್ದು, ಮಮತಾ ಬ್ಯಾನರ್ಜಿ ಅವರನ್ನು ಅತ್ಯಂತ ಕಠಿಣ ಪರಿಸ್ಥಿತಿಗೆ ತಳ್ಳಿದೆ. ಸದ್ಯಕ್ಕೆ ಅಭಿಷೇಕ ಬ್ಯಾನರ್ಜಿ ಅವರ ಬಗ್ಗೆ ಮಮತಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಪಕ್ಷದಲ್ಲಿನ ಈ ಬಿಕ್ಕಟ್ಟಿಗೆ ನೇರವಾಗಿ ಭಾರತೀಯ ಜನತಾ ಪಾರ್ಟಿ (BJP) ಕಾರಣ ಎಂದು ಅವರು ಆರೋಪಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement