ಪಂಜಾಬಿನಲ್ಲಿ ಎಎಪಿ ಅಧಿಕಾರಕ್ಕೆ ಬರುವ ಸಾಧ್ಯತೆ: ಎಬಿಪಿ-ಸಿ ವೋಟರ್ ಸಮೀಕ್ಷೆ..!

ನವದೆಹಲಿ: ಪಂಜಾಬ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಬಹುದು ಹಾಗೂ ಆಮ್ ಆದ್ಮಿ ಪಕ್ಷ ಬಹುಮತದ ತುದಿಗೆ ಬಂದು ನಿಲ್ಲಬಹುದು ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ಅಂದಾಜಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದ್ದ ಎಎಪಿ ಇದೀಗ ಅಧಿಕಾರ ಚುಕ್ಕಾಣಿ ಹಿಡಿಯುವ ಸನಿಹದಲ್ಲಿ ಬಂದು ನಿಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.
ರೈತ ಪ್ರತಿಭಟನೆ ಹಾಗೂ ಇತರೆ ರಾಜಕೀಯ ಸಮೀಕರಣದ ಬಳಿಕ ಪಂಜಾಬ್‌ನ ರಾಜಕೀಯ ಚಿತ್ರಣ ಬದಲಾಗುತ್ತಿರುವುದರ ಲಾಭ ಆಮ್‌ ಆದ್ಮಿ ಪಕ್ಷಕ್ಕೆ ಸಿಗುವ ಸಾಧ್ಯತೆ ಕಾಣುತ್ತಿದೆ ಎಂದು ಸಮೀಕ್ಷೆ ಹೇಳಿದ್ದು, ಅದರ ಅಂದಾಜಿನ ಪ್ರಕಾರ, ಪಂಜಾಬ್‌ ರಾಜ್ಯದ 117 ಕ್ಷೇತ್ರಗಳ ವಿಧಾನಸಭೆಯಲ್ಲಿ ಪ್ರತಿಪಕ್ಷ ಎಎಪಿ 25 ರಿಂದ 55ಕ್ಕೆ ಏರಲಿದ್ದು, ಇದೇ ಸಮಯದಲ್ಲಿ ಕಾಂಗ್ರೆಸ್ 77 ರಿಂದ 42ಕ್ಕೆ ಕುಸಿಯಲಿದೆ. ಇದೇವೇಳೆ ಶಿರೋಮಣಿ ಅಕಾಲಿದಳ 15 ರಿಂದ 20ಕ್ಕೆ ಏರಲಿದೆ ಎಂದು ಸಮೀಕ್ಷೆ ಹೇಳಿದೆ.
ಬಿಜೆಪಿಗೆ ರೈತ ಪ್ರತಿಭಟನೆಯ ಬಿಸಿ ಜೋರಾಗಿಯೇ ತಟ್ಟುವ ಲಕ್ಷಣಗಳಿದ್ದು, ಒಂದೂ ಸೀಟನ್ನು ಗೆಲ್ಲುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಕಳೆದ ಬಾರಿ 3 ಸೀಟುಗಳನ್ನು ಗೆದ್ದಿತ್ತು.
ಮತ ಪ್ರಮಾಣವನ್ನು ಹೋಲಿಸಿದರೆ ಕಾಂಗ್ರೆಸ್ ಶೇ.9.7ರಷ್ಟು ಮತವನ್ನು ಕಳೆದುಕೊಂಡು 28.8ರಷ್ಟು ಮತ ಗಳಿಕೆ ಮಾಡಬಹುದು. ಶಿರೋಮಣಿ ಅಕಾಲಿದಳ ಶೇ.21.8 ಹಾಗೂ ಎಎಪಿ ಶೇ.35.1 ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.
ಇನ್ನೊಂದೆಡೆ ಬಿಜೆಪಿ ಸೀಟುಗಳಲ್ಲಿ ಶೂನ್ಯ ಗಳಿಕೆಯಾದರೂ ಶಿರೋಮಣಿ ಅಕಾಲಿದಳ ಮೈತ್ರಿಕೂಟದಿಂದ ಹೊರಬಂದಿರುವುದಕ್ಕೆ ಶೇ.5.4 ರಿಂದ ಶೇ.7.3ಕ್ಕೆ ಮತ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement