ಶೌಚಾಲಯದಲ್ಲಿ ವೀಡಿಯೊ ಚಿತ್ರಿಸಿದ ಪ್ರಕರಣ: ಉಡುಪಿ ಕಾಲೇಜಿಗೆ ಭೇಟಿ ನೀಡಲಿರುವ ಖುಷ್ಬೂ

ಬೆಂಗಳೂರು: ಖ್ಯಾತ ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಸದಸ್ಯೆ ಖುಷ್ಬು ಸುಂದರ ಅವರು ಉಡುಪಿಗೆ ಭೇಟಿ ನೀಡಲಿದ್ದು, ಪ್ಯಾರಾಮೆಡಿಕಲ್ ಕಾಲೇಜಿನ ವಾಶ್‌ರೂಮ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಹ ವಿದ್ಯಾರ್ಥಿಗಳು ವಿಡಿಯೋ ರೆಕಾರ್ಡ್ ಮಾಡಿದ ಆರೋಪದ ಬಗ್ಗೆ ಪರಿಶೀಲನೆ ನಡೆಸುವುದಾಗಿ ಬುಧವಾರ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಮೂವರು ವಿದ್ಯಾರ್ಥಿನಿಯರಾದ ಶಬ್ನಾಜ್, ಅಲ್ಫಿಯಾ ಮತ್ತು ಅಲೀಮಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವಾಶ್‌ರೂಮ್‌ನಲ್ಲಿ ಮೊಬೈಲ್ ಫೋನ್ ಬಳಸಿ ಸಹ ವಿದ್ಯಾರ್ಥಿನಿಯೊಬ್ಬಳನ್ನು ವೀಡಿಯೊ ಚಿತ್ರೀಕರಿಸಿದ ಆರೋಪದ ಮೇಲೆ ನೇತ್ರ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನಿಂದ ಈ ಮೂವರನ್ನು ಅಮಾನತುಗೊಳಿಸಲಾಗಿದೆ.

ಘಟನೆಯು “ಅತ್ಯಂತ ದುಃಖಕರ” ಎಂದು ಖುಷ್ಬೂ ಹೇಳಿದ್ದಾರೆ. ಬಾಲಕಿಯರು ವಾಶ್‌ರೂಮ್‌ನಲ್ಲಿ ತಮ್ಮ ಸಹವರ್ತಿ ವಿದ್ಯಾರ್ಥಿನಿಯರ ವೀಡಿಯೊ ಚಿತ್ರೀಕರಿಸಿದ ವಿಷಯವನ್ನು ಪರಿಶೀಲಿಸಲು ಉಡುಪಿಗೆ ಹೋಗುತ್ತಿದ್ದೇನೆ. ಮಕ್ಕಳು ಇಂತಹ ಕೃತ್ಯದಲ್ಲಿ ತೊಡಗಿರುವುದು ತುಂಬಾ ದುಃಖಕರ ವಿಚಾರ. ಮಹಿಳಾ ಆಯೋಗದ ಸದಸ್ಯೆಯಾಗಿ ಈ ವಿಷಯದ ಬಗ್ಗೆ ಪರಿಶೀಲಿಸುತ್ತೇನೆ ಮತ್ತು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತೇನೆ. ಪೊಲೀಸರನ್ನೂ ಭೇಟಿ ಮಾಡುತ್ತೇನೆ. ಮಹಿಳೆಯರ ಘನತೆಯ ಜೊತೆ ಯಾರೂ ಆಟವಾಡಬಾರದು ಎಂದು ಟ್ವೀಟ್ ಮಾಡಿದ್ದಾರೆ.
ಈಗ ಈ ವಿಷಯ ರಾಜ್ಯದಲ್ಲಿ ರಾಜಕೀಯ ಗದ್ದಲಕ್ಕೂ ಕಾರಣವಾಗಿದ್ದು, ಹಿಂದೂ ಹುಡುಗಿಯ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಮೂವರು ಮುಸ್ಲಿಂ ವಿದ್ಯಾರ್ಥಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಗುರುವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳಿದೆ. ಈ ಘಟನೆ ಒಂದು ವಾರದ ಹಿಂದೆ ಜುಲೈ 19 ರಂದು ನಡೆದಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರಿನ ಸ್ಫೋಟ ಪ್ರಕರಣ ಭೇದಿಸಿದ ಪೊಲೀಸರು: ವೈಯಕ್ತಿಕ ದ್ವೇಷವೇ ಕೃತ್ಯಕ್ಕೆ ಕಾರಣ ; ಮೂವರ ಬಂಧನ

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement