ಬೆಂಗಳೂರು : ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

ಬೆಂಗಳೂರು: ವಿದೇಶಿ ತಳಿಯ ಎರಡು ಲಕ್ಷ ರೂ. ಬೆಲೆ ಬಾಳುವ ಗಿಳಿ ರಕ್ಷಿಸಲು ಹೋಗಿ, ಕರೆಂಟ್‌ ಶಾಕ್‌ ಹೊಡೆದು ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನೇ ಕಳೆದುಕೊಂಡ ಘಟನೆ ಬೆಂಗಳೂರಿನ ಗಿರಿನಗರದ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಅರುಣಕುಮಾರ (33) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಲೋಗೋ ಎಂಬಾಸಿಂಗ್ ಉದ್ಯಮ ನಡೆಸುತ್ತಿದ್ದರು ಎನ್ನಲಾಗಿದೆ. ಮಂಡ್ಯದ ನಾಗಮಂಗಲದ ಮೂಲದವರಾದ ಇವರು, ವೀರಭದ್ರನಗರದಲ್ಲಿ ವಾಸವಾಗಿದ್ದರು. ಗಿರಿನಗರದ ವಸುಂಧರಾ ಕೃತಿಕಾ ಅಪಾರ್ಟ್‌ಮೆಂಟ್‌ನಲ್ಲಿ ತಂಗಿರುವ ಸಂಬಂಧಿಕರ ಮನೆಗೆ ಅವರು ಬರುತ್ತಿದ್ದರು. ಅವರ ಮನೆಯಲ್ಲಿ ಸಾಕಿದ ಗಿಣಿ ಬಗ್ಗೆ ಅಪಾರ ಮಮಕಾರ ಬೆಳೆಸಿಕೊಂಡಿದ್ದರು ಎಂದು ಹೇಳಲಾಗಿದೆ. ಶುಕ್ರವಾರ (ಡಿ.12)ರಂದು ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಶುಕ್ರವಾರ ಬೆಳಿಗ್ಗೆ ಸುಮಾರು 9:45 ರ ಸುಮಾರಿಗೆ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಈ ವಿದೇಶಿ ಗಿಳಿ ಮನೆಯಿಂದ ಹಾರಿಹೋಗಿ ಅಪಾರ್ಟ್‌ಮೆಂಟ್ ಆವರಣದಲ್ಲಿರುವ ಹೈಟೆನ್ಷನ್ ವಿದ್ಯುತ್ ಕಂಬದ ಮೇಲೆ ಕುಳಿತಿತ್ತು. ಇದನ್ನು ರಕ್ಷಿಸಲು ಕಾಂಪೌಂಡ್ ಗೋಡೆ ಏರಿ, ಕಬ್ಬಿಣದ ಪೈಪ್‌ಗೆ ಕೋಲೊಂದನ್ನು ಕಟ್ಟಿಕೊಂಡು ಗಿಳಿಯನ್ನು ಹಿಡಿಯಲು ಪ್ರಯತ್ನಿಸಿದರು ಎಂದು ಹೇಳಲಾಗಿದೆ.
ಆಕಸ್ಮಿಕವಾಗಿ 66,000 ಕೆವಿ ಸಾಮರ್ಥ್ಯದ ಲೈವ್ ವೈರ್‌ಗೆ ಅರುಣಕುಮಾರ ಕಬ್ಬಿಣದ ಪೈಪ್‌ ಸ್ಪರ್ಷವಾಗಿದೆ. ವಿದ್ಯುತ್ ಶಾಕ್ ಹೊಡೆದ ರಭಸಕ್ಕೆ ಅವರು ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗಮಧ್ಯೆಯೇ ಅರುಣ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದರು ಎಂದು ಹೇಳಲಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement