ರೋಹಿಣಿ ಸಿಂಧೂರಿ ಕಾರ್ಯವೈಖರಿಗೆ ಅಸಮಾಧಾನ: ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ರಾಜೀನಾಮೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್‌ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಗುರುವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂತಹ ಉಸಿರುಗಟ್ಟಿಸುವ ವಾತಾವರಣದಲ್ಲಿ ನನಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕೇವಲ ಪಾಲಿಕೆ ಅಯುಕ್ತರ ಹುದ್ದೆಗಷ್ಟೇ ಅಲ್ಲ, ಐಎಎಸ್‌ ಹುದ್ದೆಗೂ ರಾಜೀನಾಮೆ ನೀಡುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸುತ್ತೇನೆ’ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಅವರು ತುಂಬಾ ಸಣ್ಣ ಬುದ್ಧಿ ಇರುವ ಅಧಿಕಾರಿ, ಇಂಥವರು ಮೈಸೂರು ಜಿಲ್ಲೆಯಲ್ಲಿ ಇರಬಾರದು. ಅವರು ಏಕೆ ಈ ರೀತಿ ವರ್ತಿಸುತ್ತಿದ್ದಾರೋ ಗೊತ್ತಿಲ್ಲ, ನನ್ನ ಮೇಲೆ ದ್ವೇಷ ಇದ್ದರೆ ಸಾಧಿಸಲಿ. ನನ್ನ ವಿರುದ್ಧ ವೈಯಕ್ತಿಕ ದ್ವೇಷ ಇಟ್ಟುಕೊಂಡು ಮೈಸೂರು ನಗರ ಹಾಗೂ ಇಲ್ಲಿನ ಜನರನ್ನು ಬಲಿಪಶು ಮಾಡುವುದು ಬೇಡ’ ಎಂದು ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದರು.
ಕೋವಿಡ್‌ ನಿರ್ವಹಣೆಯಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡಿದೆ. ಆದರೂ ಏನೂ ಕೆಲಸ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ಕೋವಿಡ್‌ ನಿರ್ವಹಣೆಯಲ್ಲಿ ಜಿಲ್ಲಾಡಳಿತದಿಂದ‌ ಪಾಲಿಕೆಗೆ ಯಾವುದೇ ಸಹಾಯ, ಸಹಕಾರ ಸಿಕ್ಕಿಲ್ಲ ಎಂದು ದೂರಿದರು.
ನನ್ನನ್ನು ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದೆ. ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಕಾರಣದಿಂದ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ನನಗೆ ಕೆಲಸ ಮಾಡುವ ಆಸಕ್ತಿಯೇ ಹೊರಟು ಹೋಗಿದೆ ಎಂದು ಬೇಸರದಿಂದ ನುಡಿದರು.
ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಸಿದ ಅವರು, ಜಿಲ್ಲಾಧಿಕಾರಿಯವರು ತಮ್ಮ ಕಾರ್ಯವೈಖರಿ ಸರಿಪಡಿಸಿಕೊಳ್ಳಬೇಕು. ಅದಾಗದಿದ್ದರೆ ಜಿಲ್ಲೆ ಬಿಟ್ಟು ತೊಲಗಬೇಕು ಎಂದರು.
ನಾನು ಇಷ್ಟು ಸೌಮ್ಯ ಸ್ವಭಾವದಿಂದ ಇದ್ದರೂ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಇಷ್ಟು ದಿನ ಅವಮಾನ ಸಹಿಸಿಕೊಂಡೇ ಇದ್ದೆ. ಆದರೆ ಇನ್ಮುಂದೆ ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಅನ್ನಿಸಿದಮೇಲೆ ಮಾಧ್ಯಮಗಳ ಮುಂದೆ ಬಂದಿದ್ದೇನೆ ಎಂದರು.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement