
ವಿಜಯಪುರ: ದರೋಡೆ ಮಾಡಿ ಪರಾರಿಯಾಗುವ ಯತ್ನದಲ್ಲಿದ್ದಾಗ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿಶೀಟರ್ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಾವಿಗೀಡಾದ ಘಟನೆ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಯುನೂಸ್ ಇಕ್ಲಾಸ್ ಪಟೇಲ್ (35) ಮೃತಪಟ್ಟ ರೌಡಿಶೀಟರ್ ಎಂದು ಗುರುತಿಸಲಾಗಿದೆ.
ನಟೋರಿಯಸ್ ರೌಡಿಯಾಗಿದ್ದ ಯುನೂಸ್ ಪಟೇಲ್, ನಗರದಲ್ಲಿ ಶುಕ್ರವಾರ ಓರ್ವನಿಗೆ ಚಾಕೂ ತೋರಿಸಿ 25 ಸಾವಿರ ಹಣ ದರೋಡೆ ಮಾಡಿ, ಆತನ ಸ್ಕೂಟರ್ ಕಿತ್ತುಕೊಂಡು ಪರಾರಿಯಾಗಿದ್ದ. ಈ ಕುರಿತು ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ತನ್ನ ಸ್ವಗ್ರಾಮ ಆಲಮೇಲ ತಾಲೂಕಿನ ದೇವಣಗಾಂವ ಕಡೆಗೆ ತೆರಳುತ್ತಿರುವ ಮಾಹಿತಿ ಗೊತ್ತಾದ ನಂತರ ಪೊಲೀಸರು, ಸಿಂದಗಿ ತಾಲೂಕಿನ ರಾಂಪುರ ಬಳಿ ಆರೋಪಿಯನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಚಾಕುವಿನಿಂದ ಇಬ್ಬರು ಪೊಲೀಸ್ ಕಾನ್ಸಸ್ಟೇಬಲ್ ಹಾಗೂ ಇನ್ಸಪೆಕ್ಟರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಇದೇ ಸಂದರ್ಭ ಆಯತಪ್ಪಿ ಬಿದ್ದ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ, ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ, ಆದರೂ ಶರಣಾಗದಿದ್ದರಿಂದ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಆತ್ಮರಕ್ಷಣೆಗಾಗಿಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಅಸ್ವಸ್ಥಗೊಂಡ ಆರೋಪಿಗೆ ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು ವೈದ್ಯರು ಆತ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೃತ ಆರೋಪಿ ಯುನೂಸ್ ಮೇಲೆ ಎರಡು ಕೊಲೆ ಪ್ರಕರಣ, ಒಂದು ಕೊಲೆಗೆ ಯತ್ನ, ಸೇರಿದಂತೆ 12 ಪ್ರಕರಣಗಳಿವೆ. ಈ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ