ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಬೆಂಗಳೂರು : ಬಿಜೆಪಿ ಯುವ ಮೋರ್ಚಾದ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ.
ನ್ಯಾಯಾಂಗ ಬಂಧನದಲ್ಲಿರುವ ಕೆ ಇಸ್ಮಾಯಿಲ್‌ ಶಫಿ (ಆರೋಪಿ 9), ಕೆ ಮೊಹಮ್ಮದ್‌ ಇಕ್ಬಾಲ್‌ (ಆರೋಪಿ 10) ಮತ್ತು ಎಂ ಶಾಹೀದ್‌ (ಆರೋಪಿ 11) ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಚ್‌.ಬಿ. ಪ್ರಭಾಕರ ಶಾಸ್ತ್ರಿ ಮತ್ತು ಅನಿಲ್‌ ಕೆ.ಕಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ತಿರಸ್ಕರಿಸಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ವರದಿ ಪ್ರಕಾರ, ಆರೋಪಿಗಳು ಪ್ರಕರಣದಲ್ಲಿ ಸಕ್ರಿಯ ಪಾತ್ರ ವಹಿಸಿರುವುದನ್ನು ತೋರಿಸಲು ಸೂಕ್ತ ಸಾಕ್ಷ್ಯಧಾರಗಳು ಲಭ್ಯವಿದೆ. ಪ್ರವೀಣ ನೆಟ್ಟಾರು ಮೇಲೆ ದಾಳಿ ನಡೆದ ವೇಳೆ ಸ್ಥಳದಲ್ಲಿ ಈ ಮೂರು ಆರೋಪಿಗಳು ಭೌತಿಕವಾಗಿ ಹಾಜರಲಿಲ್ಲವಾದರೂ ಹತ್ಯೆಗೆ ಯೋಜನೆ ರೂಪಿಸಲು ನಡೆದ ಸಂಚಿನ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನಾಲ್ವರು ಸಾಕ್ಷಿಗಳ ಹೇಳಿಕೆ ಪ್ರಕಾರ ಆರೋಪಿಗಳು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ತನಿಖಾಧಿಕಾರಿಗಳು ಸಂಗ್ರಹಿಸಿರುವ ಆರೋಪಿಗಳ ಫೋನ್‌ ಕರೆಗಳ ವಿವರಗಳು ಸಹ ಪ್ರಕರಣದಲ್ಲಿ ಮೇಲ್ಮನವಿದಾರ ಆರೋಪಿಗಳು ಪಿತೂರಿಯಲ್ಲಿ ಭಾಗಿಯಾಗಿರುವುದನ್ನು ತೋರಿಸುತ್ತದೆ. ಆರೋಪಿಗಳು ಹತ್ಯೆ ಪ್ರಕರಣದಲ್ಲಿ ಸಕ್ರಿಯ ಮತ್ತು ಗಮನಾರ್ಹ ಪಾತ್ರ ನಿರ್ವಹಿಸುವುದನ್ನು ಮೇಲ್ನೋಟಕ್ಕೆ ದೃಢಪಡಿಸುವ ಸಾಕ್ಷ್ಯಗಳು ನ್ಯಾಯಾಲಯದ ಮುಂದಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ನಮ್ಮ ಗಾಯದ ಮೇಲೆ ಉಪ್ಪು ಸವರಬೇಡಿ, ಕಸಬ್ ಹೊಗಳುವುದಿದ್ದರೆ ಪಾಕಿಸ್ತಾನಕ್ಕೆ ಹೋಗಿ": 26/11 ದಾಳಿ ಬಗ್ಗೆ ಕಾಂಗ್ರೆಸ್‌ ನಾಯಕನ ಹೇಳಿಕೆಗೆ ಕಸಬ್ ವಿಚಾರಣೆ ಸಾಕ್ಷಿಯ ಆಕ್ಷೇಪ

ನೆಟ್ಟಾರು ಹತ್ಯೆಯ ಪಿತೂರಿಯಲ್ಲಿ ಭಾಗವಹಿಸಿರುವುದು ಭಯೋತ್ಪಾದಕ ಕೃತ್ಯವನ್ನು ಸಮರ್ಥಿಸುವ, ಪ್ರೋತ್ಸಾಹಿಸುವ ಕೆಲಸವಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ ಅಡಿ (ಯುಎಪಿಎ) ಆರೋಪಿಗಳ ನಡೆಸಿರುವ ಕೃತ್ಯವು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿರುವ ಪೀಠ ಮೇಲ್ಮನವಿಯನ್ನು ವಜಾಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯನಾಗಿದ್ದ ಪ್ರವೀಣ ನೆಟ್ಟಾರು ಅವರು, ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮ ಅಕ್ಷಯ ಫ್ರೆಶ್‌ ಚಿಕೆನ್‌ ಫಾರ್ಮ್‌ ಅಂಗಡಿ ಹೊಂದಿದ್ದರು. 2022ರ ಜುಲೈ 26ರಂದು ರಾತ್ರಿ ಸುಮಾರು 8:30ರ ವೇಳೆ ಅಂಗಡಿ ಮುಚ್ಚಿ ಮನೆಗೆ ಮೋಟಾರು ವಾಹನದಲ್ಲಿ ಹೋಗುವಾಗ ಕೆಲ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ನೆಟ್ಟಾರು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ನೆಟ್ಟಾರು ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗಲೇ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು.
2022ರ ಆಗಸ್ಟ್‌ 3ರಂದುಈ ಪ್ರಕರಣವನ್ನು ಎನ್‌ಐಎಗೆ ವಹಿಸಿ ಕೇಂದ್ರ ಸರ್ಕಾರ ಆದೇಶಿಸಿತ್ತು. 2022ರ ಆಗಸ್ಟ್‌ 4ರಂದು ಎನ್‌ಐಎ ತನಿಖಾಧಿಕಾರಿಗಳು ಪ್ರಕರಣವನ್ನು ಮತ್ತೆ ದಾಖಲಿಸಿಕೊಂಡಿದ್ದರು. ಬಳಿಕ ಆರೋಪಿಗಳನ್ನು ಬಂಧಿಸಿದ್ದರು.
ಎನ್‌ಐಎ ವಿಶೇಷ ನ್ಯಾಯಾಲಯ 2023ರ ಏಪ್ರಿಲ್‌ 29ರಂದು ಈ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿತ್ತು. ನಂತರ ಆರೋಪಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ...| ಹುಲಿ-ಕರಡಿ ಮಧ್ಯೆ "ಅಪರೂಪದ" ಮುಖಾಮುಖಿ; ಆಕ್ರಮಣಕಾರಿ ಕರಡಿಗೆ ಹುಲಿಯ ತಣ್ಣನೆಯ ಉತ್ತರ | ವೀಕ್ಷಿಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement