ವಕೀಲರ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ : ಐಜೂರು ಠಾಣೆಯ ಪಿಎಸ್ಐ ಅಮಾನತು

ಬೆಂಗಳೂರು : ರಾಮನಗರದಲ್ಲಿ ವಕೀಲರ ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಐಜೂರು ಠಾಣಾ ಪಿಎಸ್ ಐ ತನ್ವೀರ್ ಹುಸೇನ್ ಅಮಾನತು ಮಾಡುವುದಾಗಿ ಗೃಹ ಸಚಿವ ಡಾ.ಪರಮೇಶ್ವರ ಅವರು ವಿಧಾನಸಭೆಗೆ ತಿಳಿಸಿದ್ದಾರೆ.
ವಿಧಾನಸಭಾ ಅಧಿವೇಶನದ ಬುಧವಾರದ ಕಾರ್ಯಕಲಾಪ ಆರಂಭವಾದ ಬಳಿಕ ಐಜೂರು ಪೊಲೀಸ್ ಇನ್ಸ್ ಪೆಕ್ಟರ್ ತನ್ವೀರ್ ಹುಸ್ಸೇನ್ ವಿರುದ್ಧ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಸದನಕ್ಕೆ ತಿಳಿಸಿದ್ದಾರೆ.
ರಾಮನಗರದಲ್ಲಿ ಜಿಲ್ಲಾ ವಕೀಲರ ಸಂಘದ 40 ಮಂದಿ ವಕೀಲರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದನ್ನು ಆಕ್ಷೇಪಿಸಿ ಮತ್ತು ಪಿಎಸ್‌ಐ ತನ್ವೀರ್‌ ಹುಸೇನ್‌ ಅಮಾನತಿಗೆ ಆದೇಶಿಸಿ ಫೆ. 22ರಂದು (ಗುರುವಾರ) ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ವಕೀಲರು ನಿರ್ಧರಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಮಂಗಳವಾರ ವಿಧಾನಸಭೆಯಲ್ಲಿ ಭಾರಿ ಕೋಲಾಹಲ ನಡೆದಿತ್ತು. ವಕೀಲ ಚಾಂದ್‌ ಪಾಷಾನನ್ನು ಗಡಿಪಾರು ಮಾಡಬೇಕು, ಐಜೂರು ಠಾಣೆಯ ಪಿಎಸ್‌ಐ ತನ್ವೀರ್‌ ಹುಸೇನ್‌ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ ಸದನದಲ್ಲಿ ಬಿಜೆಪಿ – ಜೆಡಿಎಸ್‌ ಪ್ರತಿಭಟಿಸಿತ್ತು.

ಈಗ ಈ ಬಗ್ಗೆ ಬುಧವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದು, ಪಿಎಸ್‌ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡುವುದಾಗಿ ಹೇಳಿದ್ದಾರೆ.ವಕೀಲ ಚಾಂದ್ ಪಾಶಾ ಎಂಬವರು ಜ್ಞಾನವ್ಯಾಪಿ ಮಸೀದಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ನ್ಯಾಯಾಧೀಶರ ಕುರಿತಾಗಿ ಅವಹೇಳನಕಾರಿ ಬರಹದ ಹಿನ್ನೆಲೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ.
ಚಾಂದ್ ಪಾಷಾ ಈ ಹಿಂದೆ ಕೂಡ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದರು. ಹಾಗಾಗಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಡಾ. ಜಿ. ಪರಮೇಶ್ವರ ಸ್ಪಷ್ಟನೆ ನೀಡಿದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

ಪ್ರಕರಣ ಏನು..?
ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ (Gyanvapi Mosque) ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಎಸ್​ಡಿಪಿಐ ಕಾರ್ಯಕರ್ತ, ವಕೀಲ ಚಾಂದ್ ಪಾಷಾ ಅವಹೇಳನಕಾರಿಯಾಗಿ ಪೋಸ್ಟ್‌ ಹಾಕಿದ್ದರು. ನ್ಯಾಯಾಧೀಶರ ವಿರುದ್ಧವೇ ಪೋಸ್ಟ್‌ ಹಾಕಿದ್ದಕ್ಕೆ ಎಸ್‌ಪಿ ಹಾಗೂ ವಕೀಲರ ಸಂಘಕ್ಕೆ ದೂರು ನೀಡಲಾಗಿತ್ತು. ಈ ಸಂಬಂಧ ವಕೀಲ ಚಾಂದ್‌ ಪಾಷಾ ಮೇಲೆ ಎಫ್‌ಐಆರ್‌ ದಾಖಲಾಗಿ ಬಂಧಿಸಲಾಗಿತ್ತು. ನ್ಯಾಯಾಂಗ ನಿಂದನೆ ಹಿನ್ನೆಲೆಯಲ್ಲಿ ಅವರ ಮೇಲೆ ವಕೀಲರ ಸಂಘ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಈ ವೇಳೆ ಅವರ ಬೆಂಬಲಿಗರು ವಕೀಲರ ಸಂಘಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳದಂತೆ ಮನವಿ ನೀಡಲು ಬಂದಾಗ ವಕೀಲರ ಸಂಘದ ಆವರಣದಲ್ಲಿ ಚಾಂದ್‌ ಪಾಷಾ ಬೆಂಬಲಿಗರು ಹಾಗೂ ವಕೀಲರ ನಡುವೆ ಗಲಾಟೆ ನಡೆದಿದೆ.

ನಂತರ ಪಾಷಾ ಬೆಂಬಲಿಗರ ವಿರುದ್ಧ ವಕೀಲರು ದೂರು ನೀಡಿದ್ದರು. ಈ ಸಂಬಂಧ ಎಫ್ಐಆರ್ ದಾಖಲಾಗಿತ್ತು. ನಂತರ ಪಾಷಾ ಬೆಂಬಲಿಗರಿಂದ ಪ್ರತಿ ದೂರು ದಾಖಲಾಯಿತು. ದೂರು ಸ್ವೀಕರಿಸಿ 40 ವಕೀಲರ ಮೇಲೆ ಐಜೂರು ಪಿಎಸ್ ಐ ತನ್ವೀರ್ ಎಫ್ಐಆರ್ ದಾಖಲಿಸಿದ್ದರು. ಗಲಾಟೆ ವೇಳೆ ಸ್ಥಳದಲ್ಲಿ ಇಲ್ಲದ ವಕೀಲರ ಮೇಲೂ ಸುಳ್ಳು ಎಫ್‌ಐಆರ್‌ ದಾಖಲು ಮಾಡಲಾಗಿದೆ ಎಂದು ಆರೋಪಿಸಿ ವಕೀಲರು ಪಿಎಸ್‌ಐ ಅಮಾನತಿಗೆ ಒತ್ತಾಯಿಸಿ ಪ್ರತಿಭಟನೆಗೆ ಇಳಿದರು. . ಈ ಪ್ರತಿಭಟನೆಗೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮತ್ತು ವಿಧಾನಸಭೆಯ ವಿಪಕ್ಷ ನಾಯಕ ಅಶೋಕ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿದರು. ಈ ಪ್ರತಿಭಟನೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆಯದೇ ಇದ್ದಾಗ ಈಗ ಅಹೋರಾತ್ರಿ ಡಿಸಿ ಕಚೇರಿ ಮುಂದೆ ವಕೀಲರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಬೆಂಗಳೂರಿನಲ್ಲಿಯೂ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement