ಬೆಂಗಳೂರು :ಬೆಡ್ ಹಂಚಿಕೆ ಪದ್ಧತಿಯಲ್ಲಿ ಹಲವು ಸುಧಾರಣೆಗಳಿಗೆ ಕೋರಿ ನಮ್ಮ ಮನವಿಗೆ ಬಿಬಿಎಂಪಿ ಸ್ಪಂದಿಸಿದ್ದು, ಕ್ಷಿಪ್ರಗತಿಯಲ್ಲಿ 4 ಪರಿಣಾಮಕಾರಿ ಸುಧಾರಣೆಗಳು ಈಗಾಗಲೇ ಕಾರ್ಯರೂಪಕ್ಕೆ ಬಂದಿದೆ. ಈ ಕುರಿತು ತಾಂತ್ರಿಕ ತಂಡಕ್ಕೆ 100 ತಾಸುಗಳ ಗುರಿ ನಿಗದಿ ಮಾಡಲಾಗಿತ್ತು ಎಂದು ಸಂಸದ ತೇಜಸ್ವೀ ಸೂರ್ಯ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೇವೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಹಾಗೂ ತಂತ್ರಜ್ಞರನ್ನು ಒಳಗೊಂಡ ತಂಡಗಳ ಜೊತೆಗೆ ಹಲವು ಸುತ್ತಿನ ಮ್ಯಾರಥಾನ್ ಸಭೆಗಳ ನಂತರ 4 ಸುಧಾರಣೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ಸಂಸದರು ತಿಳಿಸಿದರು.
ಬೆಡ್ ಹಂಚಿಕೆ ಕುರಿತಂತೆ ರೋಗಿಗಳಿಗೆ ನೇರ ಎಸ್.ಎಂ.ಎಸ್ ರವಾನೆ, ಬೆಡ್ ಬುಕಿಂಗ್ ಪದ್ಧತಿಯಲ್ಲಿ ಈ ಮುಂಚೆ ಜಾರಿಯಲ್ಲಿದ್ದ ಮ್ಯಾನುವಲ್ ಅನ್ ಬ್ಲಾಕ್ ವಿಧಾನ ನಿಷ್ಕ್ರಿಯ. ಬೆಡ್ ಬುಕಿಂಗ್ ನಂತರ 10 ತಾಸುಗಳ ವರೆಗೆ ನೀಡಲಾಗಿದ್ದ ಅವಧಿಯನ್ನು 4 ತಾಸು ಕಡಿತಗೊಳಿಸುವಿಕೆ. ಬೆಡ್ ಹಂಚಿಕೆ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ 2 ಹಂತದ ಲಾಗಿನ್ ದೃಢೀಕರಣ ಈ ಸುಧಾರಣೆಗಳನ್ನು ತಕ್ಷಣಕ್ಕೆ ಕಾರ್ಯರೂಪಕ್ಕೆ ತರಲಾಗಿದೆ ಎಂದರು.
ಬೆಡ್ ಹಂಚಿಕೆಗೆ ಡಿಜಿಟಲ್ ಸರದಿ ಪದ್ಧತಿ, ರಿಸರ್ವೇಷನ್ ನಲ್ಲಿ ಆಗುತ್ತಿರುವ ಸಮಯ ಮಿತಿ ಕಡಿತಗೊಳಿಸುವಿಕೆ ಹಾಗೂ ಆಧಾರ್ ಸಂಯೋಜಿತ ಬಯೋಮೆಟ್ರಿಕ್ ಅಥವಾ ಒಟಿಪಿ ಮೂಲಕ ನೋಂದಣಿ /ಡಿಸ್ಚಾರ್ಜ್ ಸೇರಿದಂತೆ ಹಲವು ಸುಧಾರಣೆಗಳು ಮುಂದಿನ ಕೆಲವು ತಾಸುಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ ಎಂದು ಸಂಸದರು ಮಾಹಿತಿ ನೀಡಿದರು.
ಬೆಡ್ ಹಂಚಿಕೆ ಸಾಫ್ಟ್ ವೇರ್ ನಲ್ಲಿನ ಹಲವು ನ್ಯೂನತೆಗಳನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಕ್ಷಿಪ್ರಕ್ರಮ ತೆಗೆದುಕೊಳ್ಳಲು ಆದೇಶ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯವೈಖರಿಯನ್ನು ನಾನು ಶ್ಲಾಘಿಸುತ್ತೇನೆ. ಈ ಕುರಿತು ನಂದನ ನಿಲೇಕಣಿ ಅವರನ್ನು ಸಂಪರ್ಕಿಸಿ, ಬಿಬಿಎಂಪಿ ಬೆಡ್ ಹಂಚಿಕೆ ಸಾಫ್ಟ್ವೇರ್ ನಲ್ಲಿನ ಹಲವು ನ್ಯೂನತೆ ಸರಿಪಡಿಸಲು ತಾಂತ್ರಿಕ ಸಹಾಯ ಕೋರಿ ಮನವಿ ಸಲ್ಲಿಸಿದ ತಕ್ಷಣ, ತ್ವರಿತವಾಗಿ ಸ್ಪಂದಿಸಿದ್ದಾರೆ. ತಕ್ಷಣವೇ ಪರಿಣಿತರ ತಂಡವನ್ನು ನಿಯೋಜನೆಗೊಳಿಸಿ ಸಹಕಾರ ನೀಡಿರುವುದಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪರಿಣಿತರ ತಂಡವು ಥಿಂಕ್ ಟ್ಯಾಂಕ್ ಸಹಯೋಗದೊಂದಿಗೆ ಕೆಲವು ಸಭೆಗಳು, ಸಲಹೆ-ಸೂಚನೆಗಳ ನಂತರ ಕೇವಲ 100 ತಾಸುಗಳ ಅವಧಿಯಲ್ಲಿ ಬೆಡ್ ಹಂಚಿಕೆ ವಿಧಾನದಲ್ಲಿದ್ದ ಹಲವು ಲೋಪದೋಷಗಳನ್ನು ಸರಿಪಡಿಸಿ ಇದನ್ನು ಕಾರ್ಯರೂಪಕ್ಕೆ ತಂದಿದೆ. ಕ್ಷಿಪ್ರ ಕಾರ್ಯನಿರ್ವಣೆಗೆ ಇಡೀ ತಂಡಕ್ಕೆ ನನ್ನ ಧನ್ಯವಾದಗಳು. ಈ ಹಿಂದೆ ರೋಗಿಗಳ ಗಮನಕ್ಕೆ ತರದೇ ಆಗುತ್ತಿದ್ದ ಬೆಡ್ ಹಂಚಿಕೆಯನ್ನು ತಡೆಗಟ್ಟಲು ಬೆಡ್ ಹಂಚಿಕೆ ಕುರಿತಾದ ಎಸ್.ಎಂಎಸ್ ಅನ್ನು ನೇರ ರೋಗಿಗಳ ದೂರವಾಣಿ ಸಂಖ್ಯೆಗೆ ಕಳುಹಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ವಾರ್ ರೂಮ್ ಗಳಲ್ಲಿ ಬೆಡ್ ಹಂಚಿಕೆ ಸಮಯದಲ್ಲಿ ಆಗುತ್ತಿದ್ದ ಅಕ್ರಮಗಳನ್ನು ತಡೆಗಟ್ಟಲು, ಈ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ ಎರಡು ಹಂತದ ಲಾಗಿನ್ ಧೃಢೀಕರಣ ಕಡ್ಡಾಯಗೊಳಿಸಲು ಸೂಚಿಸಲಾಗಿದೆ. ಇದರಿಂದ ಬೆಡ್ ಹಂಚಿಕೆಯಲ್ಲಿ ಅನವಶ್ಯಕ ಹಸ್ತಕ್ಷೇಪಕ್ಕೆ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.
ಬಿಬಿಎಂಪಿ ಸೇರಿದಂತೆ ವಲಯವಾರು ಸಹಾಯವಾಣಿಗಳಿಗೆ ಕರೆ ಮಾಡುವ ರೋಗಿಗಳ ವಿವರಗಳನ್ನು ಲೆಡ್ಜರ್ (ಲಿಖಿತ ಟಿಪ್ಪಣಿ) ಸೇರಿದಂತೆ ಇತರ ವಿಧಗಳಲ್ಲಿ ನೋಟ್ ಮಾಡಿಕೊಳ್ಳುವ ವಿಧಾನವಿತ್ತು. ಇದು ಹಲವು ಹಸ್ತಕ್ಷೇಪಗಳಿಗೆ ಕಾರಣವಾಗಿತ್ತು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿಎಚ್ ಬಿಎಂಎಸ್ ವೆಬ್ ಸೈಟ್ ನಲ್ಲಿ ಡಿಜಿಟಲ್ ಸರದಿ ಪದ್ಧತಿ ತರಲಾಗಿದೆ., ರೋಗಿಗಳ ತುರ್ತು ಅಗತ್ಯತೆ ಮೇರೆಗೆ ಬೆಡ್ ಹಂಚಿಕೆಗೆ ಆದ್ಯತೆ ಒದಗಿಸಲಾಗಿದೆ. ಡ್ಯಾಶ್ ಬೋರ್ಡ್ ಮೂಲಕ ಬೆಡ್ ಹಂಚಿಕೆಗೆ ಸಂಬಂಧಿಸಿದ ಹಲವು ವಿವರಗಳನ್ನು ಸಾರ್ವಜನಿಕರಿಗೆ ತಿಳಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಇದರ ವಿವರಗಳು ನೇರವಾಗಿ ರೋಗಿಗಳ ಮೊಬೈಲ್ ಸಂಖ್ಯೆಗೆ ತಿಳಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಗಳಲ್ಲಿ ರಿಜಿಸ್ಟ್ರೇಷನ್ ಹಾಗೂ ಡಿಸ್ಚಾರ್ಜ್ ಗೆ ಸಂಬಂಧಿಸಿದ ಮಾಹಿತಿಯನ್ನು ಆಧಾರ್ ಸಂಯೋಜಿತ ಬಯೋಮೆಟ್ರಿಕ್ ಅಥವಾ ಒಟಿಪಿ ಆಧಾರಿತ ನೋಂದಣಿ ಮಾಡಬೇಕು ಎಂದು ಹೇಳಲಾಗಿದೆ, ಈಗ ಕೋವಿಡ್ ನಿರ್ವಹಣೆಗೆ 3 ಸಾಫ್ಟ್ ವೇರ್ ( INDEX, C.H.B.M.S &SAST) ಗಳಿದ್ದು, ಇವುಗಳಲ್ಲಿನ ಯಾವುದಾದರೂ ಒಂದು ಸಾಫ್ಟ್ ವೇರ್ ಕಾರ್ಯನಿರ್ವಹಿಸದಿದ್ದರೆ ಉಳಿದವುಗಳ ನಿರ್ವಹಣೆ ಸಮರ್ಪಕವಾಗಿರದು. ಇವೆಲ್ಲವುಗಳನ್ನು ಸಂಯೋಜನೆಗೊಳಿಸಿ ಏಕೀಕೃತ ಸಾಫ್ಟ್ ವೇರ್ ಅಭಿವೃದ್ಧಿಗೆ ಸೂಚಿಸಲಾಗಿದೆ ಎಂದರು.


ನಿಮ್ಮ ಕಾಮೆಂಟ್ ಬರೆಯಿರಿ