ಇಂದು ಸರಳ-ಸಜ್ಜನಿಕೆಯ ಜನಾನುರಾಗಿ ವ್ಯಕ್ತಿ ಬಸವರಾಜ ಬಿಕ್ಕಣ್ಣವರ ಪ್ರಥಮ ಪುಣ್ಯ ಸ್ಮರಣೆ

(ಬಸವರಾಜ ಎಸ್. ಬಿಕ್ಕಣ್ಣವರ ಪ್ರಥಮ ಪುಣ್ಯ ಸ್ಮರಣೆ ರವಿವಾರ, ದಿನಾಂಕ ೧೨.೦೯.೨೦೨೧ ಧಾರವಾಡದ ಸ್ವಗೃಹದಲ್ಲಿ ಜರುಗಲಿದ್ದು, ಆ ನಿಮಿತ್ಯವಾದ ಲೇಖನ)

ಬಸವರಾಜ ಎಸ್. ಬಿಕ್ಕಣ್ಣವರ ಸರಳ, ಸಜ್ಜನಿಕೆಯ ವ್ಯಕ್ತಿ ಜನಾನುರಾಗಿಯಾಗಿದ್ದರು. ಬಿ.ಕಾಂ., ಪದವೀಧರರು, ವೃತ್ತಿಯಲ್ಲಿ ಕೃಷಿಕರಾಗಿದ್ದು, ಪ್ರವೃತ್ತಿಯಲ್ಲಿ, ಸಮಾಜ ಸೇವಕರು ಹಾಗೂ ರಾಜಕಾರಣಿಗಳಾಗಿದ್ದರು. ಬಸವರಾಜ ಸುಸಂಸ್ಕೃತ ಕುಟುಂಬ ಹಿನ್ನೆಲೆಯ ಇವರು ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾಗಿದ್ದ ದಿವಂಗತ ಎಸ್.ಸಿ. ಬಿಕ್ಕಣವರ ಮತ್ತು ಸುಶೀಲಾಬಾಯಿ ಇವರ ದ್ವಿತೀಯ ಪುತ್ರರು. ಮೂಲತಃ ಬೆಳಗಾವಿ ಜಿಲ್ಲೆಯ ಕಿತ್ತೂರಿನವರಾದ ಬಸವರಾಜ ಬಿಕ್ಕಣ್ಣವರ ಧಾರವಾಡದಲ್ಲಿ ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣವನ್ನು ಪಡೆದುಕೊಂಡಿದ್ದರು.
ಕರ್ನಾಟಕ ವಿಶ್ವವಿದ್ಯಾಲಯದ ವಾಣಿಜ್ಯ ಪದವೀಧರ ಕ್ಷೇತ್ರದಿಂದ ಮೂರು ಬಾರಿ ಸಿನೆಟ್‌ ಸದಸ್ಯರಾಗಿ ಚುನಾಯಿತಗೊಂಡು, ಎರಡು ಬಾರಿ ಸಿಂಡಿಕೇಟ್‌ ಸದಸ್ಯರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ. ಅಕಾಡೆಮಿಕ್ ಕೌನ್ಸಿಲನ್ ನಾಮಕರಣ ಸದಸ್ಯರಾಗಿ, ಮತ್ತೊಂದು ಬಾರಿಗೆ ಕ.ವಿ.ವಿ. ಸಿಂಡಿಕೇಟ ಸದಸ್ಯರಾಗಿ ಸರಕಾರದಿಂದ ನಾಮಕರಣಗೊಂಡು ಕಾರ್ಯ ನಿರ್ವಹಿಸಿದ್ದರು.
ಧಾರವಾಡ ಲಿಂಗಾಯತ ಶಿಕ್ಷಣ ಅಭಿವೃದ್ದಿ ಸಮಿತಿಯ ಉಪ ಚೇರಮನ್‌ರಾಗಿ, ಕಿತ್ತೂರಿನಕ.ಎನ್. ವಿ.ವಿ.. ಸಂಘದಗೌರವ ಕಾರ್ಯದರ್ಶಿಯಾಗಿ, ಉಳವಿ ಚೆನ್ನಬಸವೇಶ್ವರ ಹೈಸ್ಕೂಲಿನ ಆಡಳಿತ ಮಂಡಳಿ ಕಾರ್ಯದರ್ಶಿಗಳಾಗಿ, ಶೈಕ್ಷಣಿಕ ಕ್ಷೇತ್ರದ ಉನ್ನತಿಗೆ ದುಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಶಿಕ್ಷಣ ಕಾಶಿಯಲ್ಲಿ ಶಿಕ್ಷಣಕ್ಕಾಗಿ ತಮ್ಮ ಅಮೂಲ್ಯ ಸೇವೆಯನ್ನು ಸಮಯವನ್ನು ನೀಡಿ ಶಿಕ್ಷಣ ಪ್ರೇಮಿ ಎಂಬುದನ್ನು ಸಾಬೀತು ಪಡಿಸಿದ್ದರು.
ಕ್ರೀಡಾ ಚಟುವಟಿಕೆಗಳಿಗೆ ಸದಾ ಸ್ಪಂದಿಸುತ್ತಿದ್ದ ಬಸವರಾಜ ಬಿಕ್ಕಣ್ಣವರ ಕ.ವಿ.ವಿ. ಕ್ರೀಡಾ ವಿಭಾಗದ ಚೇರಮನ್ನರಾಗಿ, ವಿದ್ಯಾರ್ಥಿಗಳಲ್ಲಿ ಕ್ರೀಡಾ ಆಸಕ್ತಿಯನ್ನು ಬೆಳೆಸಿದ್ದರು. ಧಾರವಾಡದ ರಾಜ್ಯಧ್ಯಕ್ಷ ಟೆನ್ನಿಸ್‌ ಕ್ರೀಡಾ ಸಮಿತಿಯ ಆಡಳಿತ ಮಂಡಳಿ ಸದಸ್ಯರಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಕಳೆದ ಎಂಟು ವರ್ಷಗಳಿಂದ ಧಾರವಾಢದಲ್ಲಿ ತಮ್ಮ ತಂದೆ ದಿ ಎಸ್.ಸಿ. ಬಿಕ್ಕಣ್ಣವರ ಸ್ಮಾರಕ ಮುಕ್ತ ಕ್ರಿಕೇಟ್ ಪಂದ್ಯಾವಳಿಯನ್ನು ಸಂಘಟಿಸಿ, ಯುವ ಜನರಲ್ಲಿ ಕ್ರೀಡಾ ಪ್ರೇಮವನ್ನು ಮೂಡಿಸಿದ್ದರು. ಬೇಸಿಗೆ ರಜಾ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ಟೆನ್ನಿಸ್ ಕ್ರೀಡೆಯ ಬಗೆಗೆ ಜಾಗೃತಿ ಮೂಡಿಸುತ್ತಾ ೪೫ ದಿನಗಳ ಕಾಲ ಶಿಬಿರವನ್ನು ಸಂಘಟಿಸುತ್ತಾ ಬಂದಿದ್ದರು.
ಬಸವರಾಜ ಬಿಕ್ಕಣ್ಣವರ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ವಿಶೇಷವಾದ ಸೇವೆಯನ್ನು ಸಲ್ಲಿಸಿದ್ದಾರೆ. ರಾಜ್ಯ ಅಂಧರ ಸಂಸ್ಥೆಯ ಧಾರವಾಡ ಘಟಕದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅಂಧರ ಬಾಳಿಗೆ ಹೊಸತನವನ್ನು ನೀಡಿದ್ದಾರೆ. ಧಾರವಾಡ ಕೆ.ಇ. ಬೋರ್ಡ್‌ ಹೈಸ್ಕೂಲಿನ ಹಳೆಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ, ಬಸವ ಜಯಂತಿ ಸಮಿತಿ ಅಧ್ಯಕ್ಷರಾಗಿ, ಉಳವಿ ಚನ್ನಬಸವೇಶ್ವರ ಸಮಿತಿಯ ಸದಸ್ಯರಾಗಿ, ಧಾರವಾಡ ಸಿ.ಎಸ್.ಆಯ್ ವಾಣಿಜ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕ.ವಿ.ವಿ. ಕ್ರೀಡಾ ಭವನದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ರೋಟರಿ ಕ್ಲಬ್ ಸದಸ್ಯರಾಗಿ ವಿವಿಧ ಸಮಿತಿಗಳ ಪದಾಧಿಕಾರಿಗಳಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಬಸವರಾಜ ಉತ್ತಮ ರೋಟರಿ ಅಧ್ಯಕ್ಷರು ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದರು. ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ನಡೆದ ೭೮ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅನೇಕ ರೋಟರಿ ಸಮ್ಮೇಳದಲ್ಲಿ ಭಾಗವಹಿಸಿ, ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಅವರ ಶಿಸ್ತು, ಸಮಯ ಪ್ರಜ್ಞೆ , ಅಚ್ಚುಕಟ್ಟುತನ ವಿದ್ಯಾರ್ಥಿಗಳಿಗೆ ತೋರಿಸುತ್ತಿದ್ದ ಪ್ರೀತಿ ಮತ್ತು ಮಾರ್ಗದರ್ಶನ ಸದಾ ಸ್ಮರಣಿಯಾಗಿವೆ. ದೆಹಲಿಯ ಯುಪಿಎಸ್‌ಸಿ ಸಲಹಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಅವರ ಜೀವನದ ಅವಿಸ್ಮರಣೆಯ ಘಟನೆಯಲ್ಲೊಂದು..
ಕಾಂಗ್ರೆಸ್‌ ಪಕ್ಷದ ಸಕ್ರಿಯಯ ಸದಸ್ಯರಾಗುವ ಮೂಲಕ ೮೦ರ ದಶಕದಲ್ಲಿ ರಾಜಕೀಯ ಪ್ರವೇಶಿಸಿದ ಬಸವರಾಜ ಬಿಕ್ಕಣ್ಣವರ ಧಾರವಾಡ ಜಿಲ್ಲಾ ಕಾಂಗ್ರೇಸ್ ಕಮಿಟಿ ಸದಸ್ಯರಾಗಿ, ಪದಾಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸಿದರು. ಪ್ರದೇಶ ಕಾಂಗ್ರೆಸ್‌ ಕಮೀಟಿಯ ಮಾನವ ಹಕ್ಕುಗಳ ವಿಭಾಗದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಮಾಜದ ದುರ್ಬಲ ವರ್ಗದವರ, ಅಲ್ಪ ಸಂಖ್ಯಾತರ ಹಾಗೂ ನೊಂದ ಜೀವಿಗಳು ಅನ್ಯಾಯಕ್ಕೊಳಗಾದವರ ಬಗ್ಗೆ ಸದಾ ಅನುಕಂಪ ಹೊಂದಿರುವ ಬಸವರಾಜ ಬಿಕ್ಕಣ್ಣವರ ಕಾರ್ಯಶೈಲಿ ಎಲ್ಲರಿಗೂ ಮಾದರಿಯಾಗಿತ್ತು.
ಶರಣರ ಕಾಯಕ ಮತ್ತು ದಾಸೋಹ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಕ.ವಿ.ವಿ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಕ್ರೀಡಾ ಉನ್ನತಿಗೆ ಸಹಕರಿಸಿದ ಬಸವರಾಜ ಬಿಕ್ಕಣ್ಣವರ ಜೀವನ ಮತ್ತು ಆದರ್ಶಗಳನ್ನು ಅವರ ಪತ್ನಿ ಶ್ರೀಮತಿ ನಿರ್ಮಲಾ, ಸಹೋದರರಾದ ಅಶೋಕ, ವಿಶ್ವನಾಥ, ಸಹೋದರಿಯಾದ ಶ್ರೀಮತಿ ಜಯಶೀಲಾ, ದಿ. ಶ್ರೀಮತಿ ವಿಜಯಾ, ಮಗಳು ಮಹೇಶ್ವರಿ, ಅಳಿಯ ನಾಗರಾಜ, ಮಗ ಮಹಾಂತೇಶ, ಸೊಸೆ ಅಶ್ವಿನಿ, ಸಹೋದರ ಸಂಬಂದಿಯಾದ ಉಳವಿ ಚನ್ನಬಸವೇಶ್ವರ ಟ್ರಸ್ಟ ಕಮೀಟಿಯ ಚೇರಮನ್ನರಾಗಿದ್ದ ದಿ. ಚನ್ನಪ್ಪ ಅಡಿವೆಪ್ಪ ಕಿತ್ತೂರು ಪರಿವಾರ ಅವರ ಸಹಾಯ, ಮತ್ತು ಮಾರ್ಗದರ್ಶನಕ್ಕಾಗಿ ಸಾಮಾಜಿಕ ಕಾರ್ಯಗಳನ್ನು ಮಾಡಲು ಸಹಾಯವಾಗಿತ್ತು ಎಂದು ಬಸವರಾಜ ಬಿಕ್ಕಣ್ಣವರು ಸದಾ ಸ್ಮರಿಸುತ್ತಿದ್ದರು. ಸದಾಕಾಲ ಹಸನ್ಮುಖಿಯಾಗಿರುತ್ತಿದ್ದ ಬಸವರಾಜ ಬಿಕ್ಕಣ್ಣನವರ ಅವರು ಕ.ವಿ.ವಿ.ಯಲ್ಲಿ ತಮ್ಮ ಸೇವೆ ಮತ್ತು ನಡತೆಯಿಂದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮನಸ್ಸಿನಲ್ಲಿ ಸದಾಕಾಲ ಉಳಿದಿದ್ದಾರೆ.

-ಡಾ. ಮಲ್ಲಿಕಾರ್ಜುನ ಎನ್. ಮೂಲಿಮನಿ, ಗ್ರಂಥಪಾಲಕರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement