ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಭಾರತದ ವಿದೇಶಿ ವಿನಿಮಯ ಸಂಗ್ರಹ

ನವದೆಹಲಿ : ಭಾರತದ ವಿದೇಶಿ ವಿನಿಮಯ ಸಂಗ್ರಹವು ಜುಲೈ 5ಕ್ಕೆ ಅಂತ್ಯವಾದ ವಾರದಲ್ಲಿ 5.158 ಬಿಲಿಯನ್‌ ಡಾಲರ್‌ (43,081 ಕೋಟಿ ರೂ.) ಹೆಚ್ಚಳವಾಗಿದ್ದು, ಒಟ್ಟು ಸಂಗ್ರಹವು 657.155 ಬಿಲಿಯನ್‌ ಡಾಲರ್‌ (54.88 ಲಕ್ಷ ಕೋಟಿ ರೂ.)ಗೆ ತಲುಪಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.
ಸತತ ಎರಡು ವಾರಗಳ ಕುಸಿತದ ನಂತರ ಈ ಏರಿಕೆ ಕಂಡುಬಂದಿದೆ. ಜೂನ್‌ 28ರ ವೇಳೆಗೆ ವಿದೇಶಿ ವಿನಿಮಯ ಸಂಗ್ರಹ 1.713 ಬಿಲಿಯನ್‌ ಡಾಲರ್‌ ಇಳಿದು 651.997 ಬಿಲಿಯನ್‌ ಡಾಲರ್‌ ಗಳಿಗೆ ತಲುಪಿತ್ತು. ಈ ವರ್ಷದ ಜೂನ್‌ 7ರಂದು ಗರಿಷ್ಠ ಮಟ್ಟ 655.817 ಬಿಲಿಯನ್‌ ಡಾಲರ್‌ ದಾಖಲಾಗಿತ್ತು.
ವಿದೇಶಿ ಕರೆನ್ಸಿಗಳ ಸಂಗ್ರಹವು 35,313 ಕೋಟಿ ರೂ. ಹೆಚ್ಚಾಗಿದ್ದು, ಒಟ್ಟು 48.20 ಲಕ್ಷ ಕೋಟಿ ರೂ.ಗಳೀಗೆ ತಲುಪಿದೆ.

ಚಿನ್ನದ ಮೀಸಲು ಸಂಗ್ರಹದಲ್ಲಿಯೂ 7,550 ಕೋಟಿ ರೂ. ಹೆಚ್ಚಾಗಿದೆ. ಸ್ಪೆಷಲ್‌ ಡ್ರಾಯಿಂಗ್‌ ರೈಟ್ಸ್ 1.50 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಮೀಸಲು ಸಂಗ್ರಹ 33 ಕೋಟಿ ರೂ. ಅಧಿಕವಾಗಿದ್ದು, ಒಟ್ಟು ಸಂಗ್ರಹ 38,244 ಕೋಟಿ ರೂ.ಗಳಿಗೆ ತಲುಪಿದೆ.
ವಿದೇಶಿ ವಿನಿಮಯ ಮೀಸಲುಗಳಲ್ಲಿನ ಈ ದೃಢವಾದ ಬೆಳವಣಿಗೆ ಭಾರತದ ಆರ್ಥಿಕ ಬೆಳವಣಿಗೆಗೆ ಬಲ ನೀಡುತ್ತದೆ. ಜತೆಗೆ ಜಾಗತಿಕ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಹೆಚ್ಚಿನ ವಿದೇಶಿ ವಿನಿಮಯ ಮೀಸಲು ಜಾಗತಿಕ ಆರ್ಥಿಕ ಸವಾಲುಗಳ ನಡುವೆ ದೇಶದ ಕರೆನ್ಸಿ ಮತ್ತು ಹಣಕಾಸು ನೀತಿಯನ್ನು ನಿರ್ವಹಿಸುವಲ್ಲಿ ಆರ್‌ಬಿಐಗೆ ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement