ಡಿಕೆ ಶಿವಕುಮಾರ ಹೇಳಿಕೆಗೆ ಖಂಡಿಸಿ ಸಿಎಂ ಸಿದ್ದರಾಮಯ್ಯಗೆ ಸಾಹಿತಿಗಳ ಪತ್ರ

ಬೆಂಗಳೂರು: ‘ಅಕಾಡೆಮಿ, ಪ್ರಾಧಿಕಾರಗಳು ಹಾಗೂ ಸಾಹಿತಿಗಳ ಕುರಿತು ಕೆಪಿಸಿಸಿ ಅಧ್ಯಕ್ಷರು ನೀಡಿದ ಹೇಳಿಕೆ ಕಾಂಗ್ರೆಸ್‌ ಪಕ್ಷದ ನಿಲುವೂ ಆಗಿದೆ. ಸಾಹಿತಿ, ಕಲಾವಿದರು, ಸಂಸ್ಕೃತಿ ಚಿಂತಕರನ್ನು ಯಾವುದೇ ಪಕ್ಷದ ಅಡಿಯಾಳುಗಳಂತೆ ಕಾಣುವುದು ಸರಿಯಾದ ನಡವಳಿಕೆಯಲ್ಲ. ಇದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ‘ಜಾಗೃತ ನಾಗರಿಕರು-ಕರ್ನಾಟಕ’ದ ಪ್ರಮುಖರು ಹೇಳಿದ್ದು, ಸಾಹಿತಿಗಳು ಕೂಡ ರಾಜಕಾರಣಿಗಳೇ ಎಂಬ ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನೀಡಿರುವ ಹೇಳಿಕೆಯನ್ನು ಖಂಡಿಸಿದ್ದಾರೆ.
‘ಸಾಂಸ್ಕೃತಿಕ ಕ್ಷೇತ್ರ ತನ್ನ ಅಬಾಧಿತ ಗುಣದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷಣೆಯಾಗುತ್ತದೆ. ಇದು ಕೇವಲ ವ್ಯಕ್ತಿಯ ಸ್ವಾಭಿಮಾನದ ಪ್ರಶ್ನೆಯಷ್ಟೇ ಅಲ್ಲ, ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದ ಘನತೆ ಗೌರವಗಳನ್ನು ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ, ಸಾಂಸ್ಕೃತಿಕ ಕ್ಷೇತ್ರಗಳ ವಿವಾದವನ್ನು ಕೊನೆಗೊಳಿಸಲು ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಬೇಕು’ ಎಂದು ಸಂಘಟನೆಯ ಪ್ರಮುಖರಾದ ಕೆ.ಮರುಳಸಿದ್ದಪ್ಪ, ಜಿ.ರಾಮಕೃಷ್ಣ, ಎಸ್.ಜಿ. ಸಿದ್ದರಾಮಯ್ಯ, ವಿಜಯಾ, ಕೆ.ಎಸ್. ವಿಮಲಾ, ಬಿ.ಶ್ರೀಪಾದ ಭಟ್, ಟಿ.ಸುರೇಂದ್ರ ರಾವ್‌, ಬಂಜಗೆರೆ ಜಯಪ್ರಕಾಶ, ಮೀನಾಕ್ಷಿ ಬಾಳಿ, ಎನ್.ಗಾಯತ್ರಿ, ಎನ್.ಕೆ. ವಸಂತರಾಜ ಒತ್ತಾಯಿಸಿದ್ದಾರೆ.
ಡಿ.ಕೆ.ಶಿವಕುಮಾರ ಅವರ ನಡೆ ಹಾಗೂ ಹೇಳಿಕೆ ಖಂಡಿಸಿ 150ಕ್ಕೂ ಅಧಿಕ ಸಾಹಿತಿಗಳು, ಲೇಖಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅವರು ಸಂಪುಟದ ಸದಸ್ಯರಿಗೆ ತಿಳಿಹೇಳಬೇಕು ಎಂದು ಒತ್ತಾಯಿಸಿದ್ದಾರೆ.
‘ಉಪಮುಖ್ಯಮಂತ್ರಿ ಅವರ ಉದ್ಧಟತನ ಹಾಗೂ ಅಧಿಕಾರದ ದರ್ಪದಿಂದ ಕೂಡಿದ ಹೇಳಿಕೆಯನ್ನು ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ. ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಮತ್ತು ಸರ್ಕಾರದ ಇತರೆ ಸಚಿವರು ಅನುಮೋದಿಸುತ್ತಾರೆಯೇ ಎಂಬುದನ್ನು ತಿಳಿಯಬಯಸುತ್ತೇವೆ. ಉಪಮುಖ್ಯಮಂತ್ರಿ ಅವರದ್ದು ಸರ್ವಾಧಿಕಾರ ಹಾಗೂ ದರ್ಪದ ನಡೆಯಾಗಿದೆ’ ಎಂದು ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement