ಭಾರತದ ಚಿಲ್ಲರೆ ಕ್ಷೇತ್ರದ ಹಣದುಬ್ಬರ ದರವು ಜುಲೈ ತಿಂಗಳಲ್ಲಿ ಶೇ 5.59 ಆಗಿದೆ.
ಇದು ಕಳೆದ ತಿಂಗಳು ಜೂನ್ನಲ್ಲಿ ಇದ್ದ ಶೇ 6.26ಕ್ಕಿಂತ ಸ್ವಲ್ಪ ಮಟ್ಟಿಗೆ ಕಡಿಮೆ. ಇದರಿಂದಾಗಿ ಕೇಂದ್ರ ಬ್ಯಾಂಕ್ನ ಮೇಲೆ ಇದ್ದ ಒತ್ತಡ ಕಡಿಮೆ ಆಗಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ಚಿಲ್ಲರೆ ಕ್ಷೇತ್ರದ ಹಣದುಬ್ಬರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿ ಮಾಡಿಕೊಂಡಿದ್ದ ಗುರಿ ಶೇ 6ಕ್ಕಿಂತ ಮೇಲಿತ್ತು. ಸಾಂಖ್ಯಿಕ ಕಚೇರಿ ದತ್ತಾಂಶದ ಪ್ರಕಾರ, ಮೊಟ್ಟೆ, ತೈಲಗಳು ಮತ್ತು ಇತರ ವಸ್ತುಗಳು ಬೆಲೆ ಏರಿಕೆಯಾದರೂ ಆಹಾರ ಹಣದುಬ್ಬರ ದರವು ಜುಲೈನಲ್ಲಿ ಶೇ 3.96ಕ್ಕೆ ಇಳಿಕೆ ಆಗಿದೆ. ಇಂಧನ ಹಣದುಬ್ಬರ ಶೇ 12.38ರಷ್ಟಿದ್ದು, ಸೇವಾ ಹಣದುಬ್ಬರ ಜುಲೈ ಶೇ 6.71ರಷ್ಟಿತ್ತು. ಕೇಂದ್ರ ಬ್ಯಾಂಕ್ ಕಳೆದ ಶುಕ್ರವಾರ ಘೋಷಣೆ ಮಾಡಿ ಸತತವಾಗಿ ಏಳನೇ ಬಾರಿ ಬಡ್ಡಿ ದರವನ್ನು ಯಥಾ ಸ್ಥಿತಿಯಲ್ಲಿ ಉಳಿಸಿಕೊಂಡಿದೆ.
ಕೊವಿಡ್ ಬಿಕ್ಕಟ್ಟಿನಿಂದಾಗಿ ಆರ್ಥಿಕ ಸವಾಲನ್ನು ಮೆಟ್ಟಿ ನಿಲ್ಲುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಶೇ 4ರಲ್ಲಿ ಹಾಗೇ ಮುಂದುವರಿಸಿದೆ.
ಆರ್ಬಿಐನಿಂದ ಹಣದುಬ್ಬರ ಅಂದಾಜನ್ನು ಈ ಹಣಕಾಸು ವರ್ಷಕ್ಕೆ ಸರಾಸರಿ ಶೇ 5.7 ಎಂದು ತಿಳಿಸಲಾಗಿದೆ. ಅದು ಈ ಹಿಂದೆ ಅಂದಾಜು ಮಾಡಿದ್ದ ಶೇ 5.1ಕ್ಕಿಂತ ಹೆಚ್ಚು. ಈಗಿನ ಹಣದುಬ್ಬರ ದರವು ತಾತ್ಕಾಲಿಕವಾಗಿ ಪೂರೈಕೆ ಸಮಸ್ಯೆಯಿಂದ ಉದ್ಭವ ಆಗಿರುವುದು ಎಂದು ಹೇಳಲಾಗಿದೆ. ಕೊರೊನಾ ಮೂರನೇ ಅಲೆಯ ಆತಂಕದ ಮಧ್ಯೆಯೂ ಬೆಳವಣಿಗೆ ದರದ ಅಂದಾಜನ್ನು ಆರ್ಬಿಐ ಶೇ 9.5 ಎಂದು ಇರಿಸಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಾರ, ದೇಶದ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಬರುತ್ತಿವೆ. ಆದರೆ ಈಗಲೂ ಚೇತರಿಕೆಗೆ ನೀತಿ ನಿರೂಪಕರ ಬೆಂಬಲ ಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ