ಯಲ್ಲಾಪುರ : ಬೇಡ್ತಿ ನದಿಗೆ ಮೀನು ಹಿಡಿಯಲು ಹೋದಾಗ ಮೀನು ಹಿಡಿದು ವಾಪಸು ಬರುತ್ತಿರುವಾಗ ಕವಲಗಿ ಹಳ್ಳದಲ್ಲಿ ಒಮ್ಮೆಲೆ ನೀರು ಹೆಚ್ಚಾಗಿ ಇಬ್ಬರು ಕೊಚ್ಚಿ ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾದನಸರದ ಬಳಿ ನಡೆದಿದ್ದು, ಸೋಮವಾರ ಒಬ್ಬನ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.
8 ಮಂದಿ ಸೇರಿ ಕವಲಗಿ ಹಳ್ಳ ದಾಟಿ ಬೇಡ್ತಿ ನದಿಗೆ ಮೀನು ಹಿಡಿಯಲು ಹೋಗಿದ್ದರು. ಮೀನು ಹಿಡಿದು ವಾಪಸ್ ಬರುವಾಗ ಅವರಲ್ಲಿ ಮಹಮ್ಮದ ರಫೀಖ್ ಇಬ್ರಾಹಿಂ ಸಾಬ್ ಸೈಯದ್ (27 ವರ್ಷ) ಹಾಗೂ ಅವರ ತಮ್ಮ ಮಹಮ್ಮದ್ ಹನೀಫ್ ಇಬ್ರಾಹಿಂ ಸಾಬ್ ಸೈಯ್ಯದ್ (25 ವರ್ಷ) ಕವಲಗಿ ಹಳ್ಳದಲ್ಲಿ ಕೊಚ್ಚಿಹೋಗಿ ಕಾಣೆಯಾಗಿದ್ದರು ಎಂದು ಹೇಳಲಾಗಿದೆ.
ನಂತರ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹಳ್ಳದಲ್ಲಿ ಹುಡುಕಾಟ ನಡೆಸಿದ್ದರು. ಸೋಮವಾರ ಮಧ್ಯಾಹ್ನ ಘಟನೆ ನಡೆದ ಸ್ಥಳದಿಂದ 300 ಮೀಟರ್ ದೂರದಲ್ಲಿ ಮಹಮ್ಮದ ರಫೀಖ್ ಇಬ್ರಾಹಿಂ ಸಾಬ್ ಸೈಯದ್ ಎಂಬವರ ಶವ ಪತ್ತೆಯಾಗಿದ್ದು ಅವರ ಸಹೋದರ ಮಹಮ್ಮದ್ ಹನೀಫ್ ಇಬ್ರಾಹಿಂ ಸಾಬ್ ಸೈಯ್ಯದ್ ಈವರೆಗೆ ಪತ್ತೆಯಾಗಿಲ್ಲ. ಹೀಗಾಗಿ ಹುಡುಕಾಟ ಮುಂದುವರೆದಿದೆ.
ಸ್ಥಳಕ್ಕೆ ಶಿರಸಿ ಉಪವಿಭಾಗದ ಡಿ.ಎಸ್.ಪಿ. ಗೀತಾ ಪಾಟೀಲ, ಯಲ್ಲಾಪುರ ಇನ್ಸ್ಪೆಕ್ಟರ್ ರಮೇಶ ಹಾನಾಪುರ, ಪಿ.ಎಸ್.ಐ. ಯಲ್ಲಾರಲಿಂಗ ಕುನ್ನೂರು, ಸಿದ್ದಪ್ಪ ಗುಡಿ ಮೊದಲಾದವರು ಆಗಮಿಸಿದ್ದರು. ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ