ಶ್ರೀನಗರ: ಸುಮಾರು 36 ವರ್ಷಗಳ ಹಿಂದೆ ನಡೆದ, ದೇಶಾದ್ಯಂತ ಸುದ್ದಿಯಾಗಿದ್ದ ಅಂದಿನ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬೈಯಾ ಸಯೀದ್ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕೇಂದ್ರ ತನಿಖಾ ದಳ (CBI) ಸೋಮವಾರ (ಡಿಸೆಂಬರ್ 1) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಶಫತ್ ಅಹ್ಮದ್ ಶಾಂಗ್ಲೂ ಎಂದು ಗುರುತಿಸಲಾಗಿದೆ. ಈತ ನಿಷೇಧಿತ ಭಯೋತ್ಪಾದಕ ಸಂಘಟನೆ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ನಾಯಕ ಎಂದು ಹೇಳಲಾಗಿದೆ. ಅಧಿಕಾರಿಗಳ ಪ್ರಕಾರ, ಈತ ನಿಷೇಧಿತ ಭಯೋತ್ಪಾದಕ ಗುಂಪಿನ ಕಚೇರಿ ಉಸ್ತುವಾರಿಯಾಗಿದ್ದು, ಅದರ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ. ಈತನ ಬಗ್ಗೆ ಸುಳಿವು ನೀಡಿದವರಿಗೆ ₹10 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಸಿಬಿಐ ಹೇಳಿದೆ.
ಸಿಬಿಐ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸಹಯೋಗದೊಂದಿಗೆ, ಸೂಕ್ತ ಕಾನೂನು ಪ್ರಕ್ರಿಯೆಯನ್ನು ಅನುಸರಿಸಿ, ಶ್ರೀನಗರದ ನಿಶತ್ ಪ್ರದೇಶದಲ್ಲಿರುವ ಆತನ ನಿವಾಸದಿಂದ ಶಾಂಗ್ಲೂನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
1989ರ ಅಪಹರಣ ಪ್ರಕರಣ
1989ರ ಡಿಸೆಂಬರ್ 8 ರಂದು ಶ್ರೀನಗರದ ಲಾಲ್ ದೆಡ್ ಆಸ್ಪತ್ರೆ ಸಮೀಪ ರುಬೈಯಾ ಸಯೀದ್ ಅವರನ್ನು ಅಪಹರಿಸಲಾಗಿತ್ತು. ಐದು ದಿನಗಳ ನಂತರ, ಅಂದಿನ ಕೇಂದ್ರದ ವಿ.ಪಿ. ಸಿಂಗ್ ಸರ್ಕಾರವು ಐವರು ಭಯೋತ್ಪಾದಕರನ್ನು ಬಿಡುಗಡೆ ಮಾಡಿದ ನಂತರವೇ ರುಬೈಯಾ ಸಯೀದ್ ಅವರನ್ನು ಬಿಡುಗಡೆ ಮಾಡಲಾಗಿತ್ತು.
ರುಬೈಯಾ ಸಯೀದ್ ಅವರು ತಮಿಳುನಾಡಿನಲ್ಲಿ ನೆಲೆಸಿದ್ದು, 1990 ರ ದಶಕದ ಆರಂಭದಲ್ಲಿ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿತ್ತು. ಈ ಪ್ರಕರಣದಲ್ಲಿ ಯಾಸಿನ್ ಮಲಿಕ್ ಮತ್ತು ಇತರ ಒಂಬತ್ತು ಜನರ ವಿರುದ್ಧ ವಿಶೇಷ ನ್ಯಾಯಾಲಯವು ಈಗಾಗಲೇ ದೋಷಾರೋಪಣೆಯನ್ನು ರೂಪಿಸಿದೆ. ಭಯೋತ್ಪಾದಕ ಹಣಕಾಸು ಪ್ರಕರಣದಲ್ಲಿ 56 ವರ್ಷದ ಮಲಿಕ್ ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ