ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ವೇಳೆ ಬಳಸಲಾಗುತ್ತಿರುವ ಫಾರಂ-6 ಕುರಿತು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಆರೋಪಗಳನ್ನು ಚುನಾವಣಾ ಆಯೋಗ (ECI) ತಳ್ಳಿ ಹಾಕಿದೆ.
ಎಕ್ಸ್ (X) ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ಚುನಾವಣಾ ಆಯೋಗವು, “2025ರ ಜೂನ್ 24ರಂದು ಬಿಹಾರದಲ್ಲಿ ಎಸ್ಐಆರ್ಗಾಗಿ ಹೊರಡಿಸಲಾದ ಆದೇಶಕ್ಕೆ ಆಯೋಗದ ಸರ್ವಾನುಮತದ ಅನುಮೋದನೆ ದೊರೆತಿತ್ತು. ಈ ಆದೇಶವನ್ನು ಭಾರತದ ಸುಪ್ರೀಂ ಕೋರ್ಟ್ 2026ರ ಮೇ 27ರಂದು ನೀಡಿದ ತೀರ್ಪಿನಲ್ಲಿ ಎತ್ತಿಹಿಡಿದಿದೆ” ಎಂದು ತಿಳಿಸಿದೆ.
ಇದಲ್ಲದೆ, 2026ರ ಸೆಪ್ಟೆಂಬರ್ 26ರಂದು ಪ್ರಕಟಿಸಲಾದ ಪತ್ರಿಕಾ ಪ್ರಕಟಣೆ ಸಂಖ್ಯೆ 120ರ ಅಂಶ 1(iii)ರಲ್ಲಿ, “ಎಸ್ಐಆರ್ಗಾಗಿ ಫಾರಂ-6ಕ್ಕೆ ಲಗತ್ತಿಸಲಾದ ಘೋಷಣಾ ಪತ್ರವನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ಮಾನ್ಯಗೊಳಿಸಿದೆ” ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಇದಕ್ಕೂ ಮೊದಲು ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶಕುಮಾರ ಉದ್ದೇಶಪೂರ್ವಕವಾಗಿ ಮತ್ತು ಕಾನೂನುಬಾಹಿರವಾಗಿ ಫಾರಂ-6 ಅನ್ನು ಬದಲಾವಣೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಜ್ಞಾನೇಶಕುಮಾರ ಅವರು ಫಾರಂ-6 ಅನ್ನು ಕಾನೂನುಬಾಹಿರವಾಗಿ ಮತ್ತು ಏಕಪಕ್ಷೀಯವಾಗಿ ಬದಲಾವಣೆ ಮಾಡಿದ್ದಾರೆ ಎಂಬುದು ಈಗ ಅನುಮಾನಾತೀತವಾಗಿ ಸಾಬೀತಾಗಿದೆ” ಎಂದು ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಎಕ್ಸ್ನಲ್ಲಿ ಬರೆದಿದ್ದರು.
ಇದು ಬಿಜೆಪಿಗೆ ನೆರವಾಗಲು ಅವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ನಮ್ಮ ಪ್ರಜಾಪ್ರಭುತ್ವದ ಮೇಲಿನ ಈ ಅಪರಾಧಮಯ ದಾಳಿಯಲ್ಲಿ ಭಾಗಿಯಾಗಿರುವ ಅವರು ಹಾಗೂ ಇತರ ಎಲ್ಲರನ್ನೂ ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಗಾಂಧಿ ಆರೋಪಿಸಿದ್ದರು.
ಜ್ಞಾನೇಶಕುಮಾರ ಅವರು ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ ಜೋಶಿ ಅವರ ಅನುಮೋದನೆ ಪಡೆಯದೆ ಕೆಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ಕೆಲವೇ ಸಮಯದ ಬಳಿಕ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು.
ಈ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಉತ್ತರ ಸಲ್ಲಿಸಲು ಸುಪ್ರೀಂ ಕೋರ್ಟ್ ಒಂದು ವಾರದ ಕಾಲಾವಕಾಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ನೋಟಿಸ್ ಜಾರಿಗೊಳಿಸಿದೆ.
ಅರ್ಜಿಯಲ್ಲಿ, “ಈ ಅರ್ಜಿಯ ಅಂತಿಮ ವಿಚಾರಣೆ ಪೂರ್ಣಗೊಳ್ಳುವವರೆಗೆ ಪ್ರತಿವಾದಿ ಸಂಖ್ಯೆ 3 ಆಗಿರುವ ಮುಖ್ಯ ಚುನಾವಣಾ ಆಯುಕ್ತರು ತಮ್ಮ ಅಧಿಕಾರಗಳನ್ನು ಚಲಾಯಿಸದಂತೆ ನಿರ್ದೇಶಿಸಬೇಕು. ಆ ಅವಧಿಯಲ್ಲಿ ಆಯೋಗದ ವ್ಯವಹಾರಗಳನ್ನು ಪ್ರತಿವಾದಿಗಳಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ ಜೋಶಿ ಅವರ ಸರ್ವಾನುಮತದ ನಿರ್ಧಾರದ ಆಧಾರದಲ್ಲಿ ನಡೆಸಬೇಕು. ಅಲ್ಲದೆ, ಈ ಪ್ರಕ್ರಿಯೆಯಿಂದ ತೆರವಾಗುವ ಹುದ್ದೆಗೆ ನೇಮಕಾತಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನೂ ಒಳಗೊಂಡ ಸಮಿತಿಯ ಶಿಫಾರಸಿನ ಮೇರೆಗೆ ಮಾಡಬೇಕು” ಎಂದು ಕೋರಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ