ಕೊಲ್ಲೂರು ದೇವಸ್ಥಾನದ ನಕಲಿ ವೆಬ್‌ಸೈಟ್ ಸೃಷ್ಟಿಸಿ ವಂಚನೆ; ವ್ಯಕ್ತಿಯ ಬಂಧನ

ಉಡುಪಿ : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಅಧಿಕೃತ ವೆಬ್‌ಸೈಟ್ ಅನ್ನು ಹೋಲುವ ನಕಲಿ ಜಾಲತಾಣವನ್ನು ಸೃಷ್ಟಿಸಿ, ಭಕ್ತರಿಂದ ಕೊಠಡಿ ಕಾಯ್ದಿರಿಸುವ (Room Booking) ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ರಾಜಸ್ಥಾನದ 21 ವರ್ಷದ ಯುವಕನನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಆಳ್ವಾರ್ ಜಿಲ್ಲೆಯ ನಿವಾಸಿ ನಾಸಿರ್ ಹುಸೇನ್ ಬಂಧಿತ ಆರೋಪಿ. ಈತನನ್ನು ಡಿಸೆಂಬರ್ 19 ರಂದು ಪತ್ತೆಹಚ್ಚಿ ಬಂಧಿಸಲಾಗಿದ್ದು, ವಂಚನೆಗೆ ಬಳಸಲಾಗಿದ್ದ ಲ್ಯಾಪ್‌ಟಾಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆಯ ವಿವರ:
ಆರೋಪಿ ನಾಸಿರ್ ಹುಸೇನ್, ದೇವಸ್ಥಾನದ ಅಧಿಕೃತ ಪೋರ್ಟಲ್ ಮಾದರಿಯಲ್ಲೇ ನಕಲಿ ವೆಬ್‌ಸೈಟ್ ವಿನ್ಯಾಸಗೊಳಿಸಿದ್ದ. ಭಕ್ತರು ಕೊಠಡಿ ಬುಕ್ ಮಾಡಲು ಹಣ ಪಾವತಿಸಿದಾಗ ಅವರಿಗೆ ನಕಲಿ ರಸೀದಿಗಳನ್ನು ನೀಡುತ್ತಿದ್ದ. ಈ ವಂಚನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ, ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಗಳು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಆಧಾರದ ಮೇಲೆ ನವೆಂಬರ್ 3 ರಂದು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 318(2), 318(4) ಹಾಗೂ ಐಟಿ ಕಾಯ್ದೆಯ 66(C) ಮತ್ತು 66(D) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಬಂಧಿತ ಆರೋಪಿಯನ್ನು ಡಿಸೆಂಬರ್ 20 ರಂದು ಬೈಂದೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಮುಖ ಸುದ್ದಿ :-   ಬಂಗಾಳ ರಾಜಕೀಯದಲ್ಲಿ ಸುನಾಮಿ ; ದೀದಿಗೆ ಬಿಗ್ ಶಾಕ್ : ಟಿಂಎಂಸಿ ಶಾಸಕರ ಬೆಂಬಲದಿಂದಲೇ ವಿಧಾನಸಭೆ ವಿಪಕ್ಷದ ನಾಯಕನಾದ ಉಚ್ಚಾಟಿತ ಶಾಸಕ..!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement