ಬೆಂಗಳೂರು: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಬಹು .ವರದಿಗಳು ತಿಳಿಸಿವೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದ ಸಂಬಂಧ ಈಗಾಗಲೇ ಆರ್‌ಸಿಬಿ, ಕೆಎಸ್‌ಸಿಎ ಹಾಗೂ ಡಿಎನ್‌ಎ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಈಗವಿರಾಟ್ ಕೊಹ್ಲಿ ವಿರುದ್ಧ ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನೈಜ ಹೋರಾಟಗಾರರ ವೇದಿಕೆಯ ಎಚ್.ಎಂ.ವೆಂಕಟೇಶ್ ಎಂಬವರು ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಎಫ್‌ಐಆರ್ ಜೊತೆಗೆ ಕೊಹ್ಲಿ ವಿರುದ್ಧ ದೂರನ್ನು ಪರಿಗಣಿಸುವುದಾಗಿ ಕಬ್ಬನ್ ಪಾರ್ಕ್ ಪೊಲೀಸರು ಹಿಂಬರಹ ನೀಡಿದ್ದು, ಈಗಾಗಲೇ ದಾಖಲಾಗಿರುವ ಎಫ್ಐಆರ್ ಜತೆ ಇದನ್ನು ಪರಿಗಣಿಸುವುದಾಗಿ ಹಿಂಬರಹ ನೀಡಿದ್ದಾರೆ ಎಂದು ಹೇಳಲಾಗಿದೆ.
ಏತನ್ಮಧ್ಯೆ, ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡು ಹೆಚ್ಚುವರಿ ಪ್ರಕರಣಗಳು ದಾಖಲಾಗಿವೆ. ಕಾಲ್ತುಳಿತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ರೋಲ್ಯಾಂಡ್ ಗೋಮ್ಸ್ ಅವರು ನೀಡಿದ ದೂರಿನ ಆಧಾರದ ಮೇಲೆ, ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ಮತ್ತು ಡಿಎನ್‌ಎ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 125 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೊದಲ ಬಾರಿ ಐಪಿಎಲ್ (IPL) ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(RCB)ದ ಸಂಭ್ರಮಾಚರಣೆ ವೇಳೆ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ