ಬೆಂಗಳೂರು : ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣ ; ಮೂವರ ಬಂಧನ

ಬೆಂಗಳೂರು : ಬೆಂಗಳೂರಿನ ಕಲಾಸಿಪಾಳ್ಯ ಬಸ್‌ ನಿಲ್ದಾಣದಲ್ಲಿ ಜಿಲೆಟಿನ್‌ ಹಾಗೂ ಡಿಟೊನೇಟರ್‌ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಗಣೇಶ, ಶಿವ ಹಾಗೂ ಮುನಿಯಪ್ಪ ಬಂಧಿತ ಆರೋಪಿಗಳು. ಜುಲೈ 23ರಂದು ಮಧ್ಯಾಹ್ನ ಕಲಾಸಿಪಾಳ್ಯದ ಶೌಚಾಲಯದ ಬಳಿ ಜಿಲೆಟಿನ್‌, ಡಿಟೊನೇಟರ್‌ ಪತ್ತೆಯಾಗಿದ್ದವು. ನಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ 6 (ಆರ್.ಇ.ಎಕ್ಸ್ – 90) ಜಿಲೆಟಿನ್ ಜೆಲ್, 12 ಎಲೆಕ್ಟ್ರಿಕ್ ಡಿಟೋನೇಟರ್‌ಗಳನ್ನ ವಶಕ್ಕೆ ಪಡೆದಿದ್ದರು. ಅಲ್ಲದೆ, ಆರೋಪಿಗಳ ಪತ್ತೆಗಾಗಿ 5 ಪ್ರತ್ಯೇಕ ತಂಡಗಳನ್ನ ರಚಿಸಲಾಗಿತ್ತು‌.
‘ಬೋರ್‌ವೆಲ್ ಕಾಮಗಾರಿಗಾಗಿ ಕೋಲಾರದಿಂದ ಸ್ಫೋಟಕಗಳನ್ನ‌ ಖರೀದಿಸಿ ತರಲಾಗಿತ್ತು. ಚಾಮರಾಜನಗರದ ಕೊಳ್ಳೆಗಾಲಕ್ಕೆ ಕೊಂಡೊಯ್ಯುತ್ತಿದ್ದ ಆರೋಪಿಗಳು ಶೌಚಾಲಯಕ್ಕೆ ಹೋಗಿ ವಾಪಸ್​​ ಬರುವಷ್ಟರಲ್ಲಿ ಪೊಲೀಸರು ಬ್ಯಾಗ್‌ಗಳನ್ನ ತಪಾಸಣೆ ಮಾಡುತ್ತಿದ್ದರು.

ಅದರಿಂದ ಗಾಬರಿಯಾಗಿ ಆರೋಪಿಗಳು ಬ್ಯಾಗ್‌ಗಳನ್ನ ಬಿಟ್ಟು ಪರಾರಿಯಾಗಿರುವುದಾಗಿ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ತಿಳಿಸಿದ್ದಾರೆ’ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತಕುಮಾತ ಸಿಂಗ್ ತಿಳಿಸಿದ್ದಾರೆ.
ಕಲ್ಲು ಗಣಿಗಾರಿಕೆ, ಬೋರ್‌ವೆಲ್ ಕಾಮಗಾರಿ ವೇಳೆ ಸ್ಫೋಟಕಗಳನ್ನ ಪರವಾನಗಿ ಇಲ್ಲದೇ ಬಳಸುವಂತಿಲ್ಲ. ಆದರೆ ಆರೋಪಿಗಳು ಯಾವುದೇ ನಿಯಮ ಪಾಲಿಸಿಲ್ಲ ಹಾಗೂ ಸೂಕ್ತ ಸಂಗ್ರಹಣೆ ವ್ಯವಸ್ಥೆ ಹೊಂದಿಲ್ಲ ಎನ್ನಲಾಗಿದೆ. ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 22 ಜೀವಂತ (ಆರ್.ಇ.ಎಕ್ಸ್-90) ಜೆಲೆಟಿನ್ ಕಡ್ಡಿಗಳು ಹಾಗೂ 30 ಎಲೆಕ್ಟ್ರಿಕ್ ಡಿಟೋನೇಟರ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳ ಪತ್ತೆಗೂ ಬಲೆ ಬೀಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement