ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ (Legislative Council) ನಡೆದ ಚುನಾವಣೆಯಲ್ಲಿ ಎಲ್ಲ 11 ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಕಾಂಗ್ರೆಸ್‌ನಿಂದ 7, ಬಿಜೆಪಿಯಿಂದ 3, ಜೆಡಿಎಸ್‌ನಿಂದ 1 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂಬಂಧ ಚುನಾವಣಾ ಅಧಿಕಾರಿ ವಿಶಾಲಾಕ್ಷಿ ಅಧಿಕೃತ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್‌ನಿಂದ ಬೋಸರಾಜು, ಐವಾನ್ ಡಿಸೋಜಾ, ವಸಂತಕುಮಾರ, ಬಿಲ್ಕೀಸ್ ಬಾನು, ಜಗದೇವ ಗುತ್ತೇದಾರ, ಗೋವಿಂದ ರಾಜು, ಯತೀಂದ್ರ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಸಿ.ಟಿ.ರವಿ, ಎನ್. ರವಿಕುಮಾರ ಹಾಗೂ ಎಂ.ಜಿ.ಮೂಳೆ ಆಯ್ಕೆಯಾಗಿದ್ದು, ಜೆಡಿಎಸ್‌ನಿಂದ ಜವರಾಯೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿಗೆ 11 ಸದಸ್ಯರನ್ನು ಆಯ್ಕೆ ಮಾಡಲು ದೈವಾರ್ಷಿಕ ಚುನಾವಣೆಯನ್ನು ಜೂನ್ 13 ರಂದು ನಿಗದಿಪಡಿಸಲಾಗಿತ್ತು, ಮೇ 27ರಿಂದ ಜೂನ್ 3ರ ವರೆಗೆ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಒಟ್ಟು 12 ಜನ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು. ಆದರೆ ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಆಸಿಫ್ ಪಾಷಾ ಆರ್.ಎಮ್. ಎಂಬವರ ನಾಮಪತ್ರವು ಸೂಚಕರಿಲ್ಲದ ಕಾರಣ ತಿರಸ್ಕೃತಗೊಂಡಿತ್ತು. ಉಳಿದ 11 ಜನ ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರಗೊಂಡಿದ್ದವು. ಜೂನ್ 6ರಂದು 3 ಗಂಟೆಯ ಒಳಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಆದರೆ ಯಾರೊಬ್ಬರು ನಾಮಪತ್ರ ಹಿಂಪಡೆಯದ ಕಾರಣ ಈಗ ಅವರೆಲ್ಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ