ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್‌ವೈ ಕೆಳಗಿಳಿಸಬಾರದು: 10ಕ್ಕೂ ಹೆಚ್ಚು ಮಠಾಧೀಶರಿಂದ ಬಿಜೆಪಿ ಹೈಕಮಾಂಡ್​ಗೆ ಒತ್ತಾಯ

ತುಮಕೂರು: ರಾಜ್ಯದ ಮುಖ್ಯಮಂತ್ರಿ ಸ್ಥಾನದಿಂದ ಬಿ. ಎಸ್​. ಯಡಿಯೂರಪ್ಪ ಅವರನ್ನು ಕೆಳಗಿಳಿಸಬಾರದು ಎಂದು ವೀರಶೈವ ಲಿಂಗಾಯತ ಮಠಾಧೀಶರು ಬಿಜೆಪಿ ಹೈಕಮಾಂಡ್​ಗೆ ಸಂದೇಶ ರವಾನಿಸಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರಿನ ಷಡಕ್ಷರಿ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ 10ಕ್ಕೂ ಹೆಚ್ಚು ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ವ್ಯಕ್ತಿಗಳು ಅವರ ಸ್ಥಾನಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಎಂದು ಹೇಳಿದ್ದಾರೆ.
ಷಡಕ್ಷರಿ ಮಠದ ರುದ್ರಮುನಿ ಸ್ವಾಮಿಜಿ, ಜಂಗಮ ಮಠದ ಸಿದ್ದಲಿಂಗ ಸ್ವಾಮಿಜಿ, ಬೆಳ್ಳಾವಿ ಕಾರದ ಮಠದ ವೀರಬಸವ ಸ್ವಾಮಿಜಿ ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ವಾಮಿಜಿಗಳು ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಬಿಜೆಪಿ ಹೈಕಮಾಂಡ್​ಗೆ ಒಕ್ಕೊರಲಿನ ಸಂದೇಶ ರವಾನಿಸಿದ್ದಾರೆ.

ಕರುಣಾನಿಧಿ ವ್ಹೀಲ್​ಚೇರ್​ನಲ್ಲಿ ಕುಳಿತು ಆಡಳಿತ ಮಾಡಿಲ್ವಾ..?
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಹುನ್ನಾರ ನಡೆಯುತ್ತಿದೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ನಡೆಯಲು ಆಗಲ್ಲ. ಕಿವಿ ಕೇಳಿಸುವುದಿಲ್ಲ ಎಂದು ಅಪಪ್ರಚಾರ ನಡೆದಿದೆ. ಕರುಣಾನಿಧಿ ವ್ಹೀಲ್​ಚೇರ್​ನಲ್ಲಿ ಕುಳಿತು ಆಡಳಿತ ಮಾಡಿಲ್ವೇ? ಯಡಿಯೂರಪ್ಪ ಅವರಿಗೆ ಅಷ್ಟೊಂದು ವಯಸ್ಸಾಗಿದೆಯೇ? ಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು. ಅಂಥವರನ್ನು ತುಳಿಯಲು, ಮೂಲೆಗುಂಪು ಮಾಡಲು ಪಿತೂರಿ ನಡೆದಿದೆ ಎಂದು ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯ ನಾಯಕನಿಗೆ ಅನ್ಯಾಯವಾಗುತ್ತಿದೆ. ಸಮುದಾಯದ ನಾಯಕನಿಗೆ ಅನ್ಯಾಯವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ವೀರಶೈವ ಲಿಂಗಾಯತ ಸಮುದಾಯದಿಂದ ಬಿಜೆಪಿಗೆ ಮತ ಬಿದ್ದಿದೆ. ಆದ್ದರಿಂದಲೇ ರಾಜ್ಯದಲ್ಲಿ ಬಿಜೆಪಿಗೆ 100ಕ್ಕೂ ಹೆಚ್ಚು ಸ್ಥಾನ ಬಂದಿದೆ. ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಾರದು ಎಂದು ಆಗ್ರಹಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಧಾನಸೌಧ ಸ್ಫೋಟದ ಎಐ ವಿಡಿಯೊ ಸೃಷ್ಟಿಸಿ ಹಂಚಿಕೊಂಡ ಆರೋಪ : ಕಿಡಿಗೇಡಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement