ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆ ನಡೆಸಲು ʼಲೋಕಪಾಲʼ ಆದೇಶ

ನವದೆಹಲಿ: ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆಯಡಿ (ಪಿಸಿಎ) ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಲೋಕಪಾಲವು ಮಂಗಳವಾರ ಸಿಬಿಐಗೆ ನಿರ್ದೇಶನ ನೀಡಿದೆ.
ಮಹುವಾ ಮೊಯಿತ್ರಾ ವಿರುದ್ಧದ ಆರೋಪಗಳು ಗಂಭೀರವಾಗಿದ್ದು ಬಲವಾದ ಪುರಾವೆಗಳಿವೆ ಎಂದು ನ್ಯಾಯಾಂಗ ಸದಸ್ಯೆ ನ್ಯಾ. ಅಭಿಲಾಷಾ ಕುಮಾರಿ, ಸದಸ್ಯರಾದ ಅರ್ಚನಾ ರಾಮಸುಂದರಂ ಹಾಗೂ ಮಹೇಂದರ್ ಸಿಂಗ್ ಅವರನ್ನೊಳಗೊಂಡ ಲೋಕಪಾಲ ಪೀಠ ತಿಳಿಸಿದೆ.
ದಾಖಲೆಯಲ್ಲಿ ಲಭ್ಯವಿರುವ ಎಲ್ಲ ಸಾಕ್ಷ್ಯಗಳನ್ನು ಎಚ್ಚರಿಕೆಯಿಂದ ಪರಿಶೀಲಿಸದ ಬಳಿಕ ಮಹುವಾ ಅವರ ವಿರುದ್ಧ ಮಾಡಲಾದ ಆರೋಪಗಳಿಗೆ ಬಲವಾದ ಸಾಕ್ಷ್ಯಗಳಿರುವುದು ಕಂಡುಬಂದಿದೆ. ಆರೋಪ ಅತ್ಯಂತ ಗಂಭೀರ ಸ್ವರೂಪದ್ದು ಎಂಬ ಬಗ್ಗೆ ಯಾವುದೇ ಸಂದೇಹ ಇಲ್ಲ. ಹಾಗಾಗಿ ಈ ಬಗ್ಗೆ ಆಳವಾದ ತನಿಖೆ ನಡೆಸುವ ಅಗತ್ಯವಿದೆ ಎಂದು ಅದು ಹೇಳಿದೆ.

ಸಿಬಿಐ ಸಲ್ಲಿಸಿದ ವರದಿ ಪ್ರಕಾರ, ಮಹುವಾ ತಮ್ಮ ಲಾಗಿನ್‌ ವಿವರಗಳನ್ನು ಹಾಗೂ ಲೋಕಸಭಾ ಆನ್‌ಲೈನ್‌ ವೇದಿಕೆಯ ಸದಸ್ಯರ ಪಾಸ್‌ವರ್ಡ್‌ಅನ್ನು ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದಾನಿ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂಬ ಮೊದಲ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ. ಪ್ರಶ್ನೆಗಳನ್ನು ಆನ್‌ಲೈನ್‌ ವೇದಿಕೆಯಲ್ಲಿ ಪ್ರಕಟಿಸಲು ಅನುವು ಮಾಡಿಕೊಡುವ ಸಲುವಾಗಿ ಮಹುವಾ ಮೊಯಿತ್ರಾ ಅವರು ತನ್ನೊಂದಿಗೆ ಆನ್‌ಲೈನ್‌ ವೇದಿಕೆಯ ಪಾಸ್‌ವರ್ಡ್‌ ಹಂಚಿಕೊಂಡಿರುವುದಾಗಿ ದರ್ಶನ್ ಹಿರಾನಂದಾನಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಮಹುವಾ ಕೇಳಿದ ಎಲ್ಲಾ 58 ಆನ್‌ಲೈನ್‌ ಪ್ರಶ್ನೆಗಳನ್ನು ತಾನು ಟೈಪ್‌ ಮಾಡಿದ್ದಾಗಿ ವಿಚಾರಣೆ ವೇಳೆ ದರ್ಶನ್‌ ದೃಢಪಡಿಸಿದ್ದಾರೆ ಎಂದು ಲೋಕಪಾಲ ಹೇಳಿದೆ.

ಪ್ರಮುಖ ಸುದ್ದಿ :-   ಗರ್ಭಧಾರಣೆ ಕುರಿತ ಪುಸ್ತಕದಲ್ಲಿ 'ಬೈಬಲ್' ಪದ ಬಳಕೆ: ನಟಿ ಕರೀನಾ ಕಪೂರಗೆ ಮಧ್ಯಪ್ರದೇಶ ಹೈಕೋರ್ಟ್ ನೋಟಿಸ್

ಪ್ರಶ್ನೆ ಕೇಳುವುದಕ್ಕಾಗಿ ಉಡುಗೊರೆ ಪಡೆಯಲಾಗಿದೆಯೇ ಎಂಬ ಬಗ್ಗೆ ವಿಸ್ತೃತ ತನಿಖೆ ನಡೆಸುವ ಅಗತ್ಯವಿದೆ. ದೂರಿನಲ್ಲಿ ಮಾಡಲಾದ ಸಮಗ್ರ ಆರೋಪಗಳ ಬಗ್ಗೆ ಎಲ್ಲಾ ಆಯಾಮಗಳಿಂದ ಸಿಬಿಐ ತನಿಖೆ ನಡೆಸಬೇಕು. ಆದೇಶ ಸ್ವೀಕರಿಸಿದ ದಿನದಿಂದ ಆರು ತಿಂಗಳೊಳಗೆ ತನಿಖಾ ವರದಿಯನ್ನು ಸಲ್ಲಿಸಬೇಕು. ತನಿಖೆಯ ಸ್ಥಿತಿಗತಿ ಬಗ್ಗೆ ಸಿಬಿಐ ಪ್ರತಿ ತಿಂಗಳು ನಿಯಮಿತ ವರದಿಗಳನ್ನು ಸಹ ಸಲ್ಲಿಸಬೇಕು ಎಂದು ಲೋಕಪಾಲ ನಿರ್ದೇಶನಗಳನ್ನು ನೀಡಿದೆ.
ಉದ್ಯಮಿ ದರ್ಶನ್‌ ಜೊತೆ ಪಾಸ್‌ವರ್ಡ್‌ ಹಂಚಿಕೊಂಡದ್ದಕ್ಕೆ ಸಂಬಂಧಿಸಿದಂತೆ ಮಹುವಾ ವಿರುದ್ಧ ವಕೀಲ ಜೈ ಅನಂತ ದೆಹದ್ರಾಯ್ ಮಾಡಿದ್ದ ಆರೋಪಗಳ ಮೇಲೆ ಸಂಸತ್‌ ಸದಸ್ಯರೊಬ್ಬರು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಲೋಕಪಾಲವು ಈ ನಿರ್ದೇಶನಗಳನ್ನು ನೀಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement