ಕಾರವಾರ: ನಕಲಿ ದಾಖಲೆ ನೀಡಿ ಕದಂಬ ನೌಕಾನೆಲೆಗೆ ನುಗ್ಗಲು ಯತ್ನಿಸಿದ ಯುವಕನೊಬ್ಬನನ್ನು ನೌಕಾಪಡೆ ಪೊಲೀಸರು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರ್ಗಾದ ಕದಂಬ ನೌಕಾನೆಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಬಂಧೀತನನ್ನು ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಕಿರಣ್ ಎಸ್.ಆರ್. ಎಂದು ಗುರುತಿಸಲಾಗಿದೆ. ತಾನು ನೌಕಾಪಡೆಯ ಪ್ರೊಬೆಷನರಿ ಸಬ್ ಲೆಫ್ಟಿನೆಂಟ್ ಆಫೀಸರ್ ಎಂದು ಪರಿಚಯಿಸಿಕೊಂಡು ಒಳ ಪ್ರವೇಶಿಸಲು ಪ್ರಯತ್ನಿಸಿದ್ದ ಎಂದು ಹೇಳಲಾಗಿದೆ.
ಮಾನವ ಸಂಪನ್ಮೂಲ ಮತ್ತು ಯೋಜನಾ ನಿರ್ದೇಶನಾಲಯದಿಂದ 2021ರ ಡಿಸೆಂಬರ್ 14ರಂದು ತನಗೆ ನೇಮಕಾತಿಯಾಗಿದೆ ಎಂದು ಹೇಳಿಕೊಂಡಿದ್ದ ಈತ ತನ್ನ ಗುರುತಿನ ಚೀಟಿ ಮತ್ತು ಸಂಖ್ಯೆಯನ್ನು ನೌಕಾ ನೆಲೆಯ ಮುಖ್ಯ ಗೇಟ್ ಬಳಿ ತೆರಳುವಾಗ ತಪಾಸಣೆ ವೇಳೆ ನೀಡಿದ್ದ, ಆದರೆ ಆತ ನೀಡಿದ ದಾಖಲೆಗಳು ಮತ್ತು ಗುರುತಿನ ಚೀಟಿಯನ್ನು ಪರಿಶೀಲನೆ ನಡೆಸಿದಾಗ ಇವೆಲ್ಲ ನಕಲಿ ಎಂಬುದು ದೃಢಪಟ್ಟ ನಂತರ ನೌಕಾನೆಲೆಯ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಕಾರವಾರ ಗ್ರಾಮೀಣ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ