ಬೆಂಗಳೂರು: ಜಿಎಸ್‌ಟಿ ಇಳಿಕೆಯ ಖುಷಿಯಲ್ಲಿದ್ದ ಕರ್ನಾಟಕದ ಜನರಿಗೆ ಕೆಎಂಎಫ್ (KMF) ದರ ಏರಿಕೆಯ ಬಿಸಿ ಮುಟ್ಟಿಸಿದೆ. ನಂದಿನಿ ತುಪ್ಪದ ದರವನ್ನು ಪ್ರತಿ ಲೀಟರ್‌ಗೆ 90 ರೂಪಾಯಿಗಳಷ್ಟು ಏರಿಕೆ ಮಾಡಿದೆ.
2017 ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗಿತ್ತು. ನಂತರ 2022 ರಲ್ಲಿ ಜಿಎಸ್‌ಟಿ ಪ್ರಮಾಣವನ್ನು ಶೇ. 22ಕ್ಕೆ ಏರಿಕೆ ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರವು ಸೆಪ್ಟೆಂಬರ್‌ನಲ್ಲಿ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ. 12 ರಿಂದ ಶೇ. 5ಕ್ಕೆ ಇಳಿಕೆ ಮಾಡಿತ್ತು. ಇದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ರಾಜ್ಯಗಳಿಗೆ ಸೂಚಿಸಿತ್ತು. ಅದರಂತೆ, ಕೆಎಂಎಫ್ ದಸರಾ ವೇಳೆ ನಂದಿನಿ ತುಪ್ಪದ ಬೆಲೆಯನ್ನು ಲೀಟರ್‌ಗೆ 40 ರೂಪಾಯಿ ಕಡಿತಗೊಳಿಸಿ ಗ್ರಾಹಕರಿಗೆ ಸಿಹಿ ಸುದ್ದಿ ಕೊಟ್ಟಿತ್ತು. ಆದರೆ ಈಗ ನಂದಿನಿ ತುಪ್ಪದ ದರವನ್ನು ಕೆಎಂಎಫ್ ದಿಢೀರ್ ಹೆಚ್ಚಳ ಮಾಡಿದೆ.
ನಂದಿನಿ ತುಪ್ಪ ಹೊಸ ದರ
50 ಎಂಎಲ್: 47 ರೂ.
100 ಎಂಎಲ್: 75 ರೂ.
200 ಎಂಎಲ್: 155 – 165 ರೂ.
500 ಎಂಎಲ್: 350 – 360 ರೂ.
1 ಲೀಟರ್ (1000 ಎಂಎಲ್): 700 – 720 ರೂ.
ಈ ಹಿಂದೆ ಒಂದು ಲೀಟರ್ ನಂದಿನಿ ತುಪ್ಪವು 610 ರೂಪಾಯಿಗೆ ಮಾರಾಟವಾಗುತ್ತಿತ್ತು. ಇದೀಗ 90 ರೂಪಾಯಿಗಳ ಹೆಚ್ಚಳದೊಂದಿಗೆ, ಗ್ರಾಹಕರು ಒಂದು ಲೀಟರ್ ತುಪ್ಪಕ್ಕಾಗಿ 700 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ದರ ಏರಿಕೆ ಹಿನ್ನೆಲೆಯಲ್ಲಿ ಈ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ ಎಂದು ಕೆಎಂಎಫ್ ಸಮರ್ಥಿಸಿಕೊಂಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ