ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ

ನವದೆಹಲಿ: ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಉಪಾಹಾರ ಮಂದಿರಗಳಲ್ಲಿ ಬಳಸಲಾಗುವ ವಾಣಿಜ್ಯ ಬಳಕೆಯ (Commercial) ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಸೋಮವಾರದಿಂದ ಏರಿಕೆಯಾಗಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 42 ರೂಪಾಯಿಯಷ್ಟು ಹೆಚ್ಚಳ ಮಾಡಿವೆ. ಆದರೆ, ಗೃಹಬಳಕೆಯ ಅಡುಗೆ ಅನಿಲದ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಮೆಟ್ರೋ ನಗರಗಳಲ್ಲಿನ ನೂತನ ದರಗಳು
ತಾಜಾ ದರ ಪರಿಷ್ಕರಣೆಯ ನಂತರ, ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ.
ದೆಹಲಿಯಲ್ಲಿ  19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ  42 ರೂಪಾಯಿಯಷ್ಟು ಹೆಚ್ಚಳವಾಗಿ ಚಿಲಿಂಡರ್‌ ಬೆಲೆ 3,071.50 ರೂಪಾಯಿಯಿಂದ 3,113.50 ರೂಪಾಯಿಗೆ ಏರಿಕೆಯಾಗಿದೆ.ಕೋಲ್ಕತ್ತಾದಲ್ಲಿ 53.50 ರೂಪಾಯಿಗಳಷ್ಟು ಗರಿಷ್ಠ ಏರಿಕೆ ಕಂಡುಬಂದಿದೆ. ಚೆನ್ನೈನಲ್ಲಿ ರಾಜಧಾನಿಯಲ್ಲಿ ಸಿಲಿಂಡರ್ ಬೆಲೆಯಲ್ಲಿ 46 ರೂಪಾಯಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 46 ರೂ. ಹೆಚ್ಚಳವಾಗಿದೆ.
ವಾಣಿಜ್ಯ ಇಂಧನ ಬೆಲೆಗಳು ಸತತವಾಗಿ ಏರಿಕೆಯಾಗುತ್ತಿದ್ದರೂ, ಇತ್ತೀಚಿನ ತಿಂಗಳುಗಳಲ್ಲಿ ಗೃಹಬಳಕೆಯ ಸಿಲಿಂಡರ್ ದರಗಳು ಯಾವುದೇ ಬದಲಾವಣೆಯಿಲ್ಲದೆ ಸ್ಥಿರವಾಗಿವೆ.
ಆರು ತಿಂಗಳಲ್ಲಿ ದುಪ್ಪಟ್ಟಾದ ಬೆಲೆ!
ಚಾಲ್ತಿ ವರ್ಷದ ಆರಂಭದಿಂದಲೂ ವಾಣಿಜ್ಯ ಎಲ್‌ಪಿಜಿ ಬೆಲೆಗಳು ತೀವ್ರವಾಗಿ ಹೆಚ್ಚುತ್ತಿದ್ದು, ಹೋಟೆಲ್ ಮತ್ತು ಆಹಾರ ವ್ಯವಹಾರಗಳ ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿವೆ. ಜನವರಿಯಲ್ಲಿ ದೆಹಲಿಯಲ್ಲಿ ಕೇವಲ 1,691.50 ರೂಪಾಯಿ ಇದ್ದ 19 ಕೆಜಿ ಸಿಲಿಂಡರ್ ಬೆಲೆ, ಸೋಮವಾರ ಜಾರಿಗೆ ಬಂದ ಪರಿಷ್ಕೃತ ದರದ ಬಳಿಕ ಬರೋಬ್ಬರಿ 3,113.50 ರೂಪಾಯಿಗೆ ತಲುಪಿದೆ.
 ಫೆಬ್ರವರಿ: 49 ರೂಪಾಯಿ ಹೆಚ್ಚಳ
ಮಾರ್ಚ್: 115 ರೂಪಾಯಿ ಹೆಚ್ಚಳ
ಏಪ್ರಿಲ್: 993 ರೂಪಾಯಿಗಳ ದಿಢೀರ್ ಜಂಪ್!
ಮೇ: ಬೆಲೆಗಳು ಗರಿಷ್ಠ ಮಟ್ಟದಲ್ಲೇ ಮುಂದುವರಿದಿದ್ದವು.
ಜೂನ್: ಪ್ರಸಕ್ತ ಸೋಮವಾರದಿಂದ ಮತ್ತೆ ಬೆಲೆ ಏರಿಕೆ ಮಾಡಲಾಗಿದೆ.
ಬೆಲೆ ಏರಿಕೆಗೆ ಕಾರಣವೇನು?
ಇರಾನ್‌ ಯುದ್ಧದಿಂದ ಉಂಟಾದ ಉದ್ವಿಗ್ನತೆ (Geopolitical tensions) ಮತ್ತು ಸರಬರಾಜು ವ್ಯವಸ್ಥೆಯ ಆತಂಕಗಳಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಬೆಲೆಗಳು ತೀವ್ರವಾಗಿ ಹೆಚ್ಚುತ್ತಿವೆ. ಅಂತಾರಾಷ್ಟ್ರೀಯ ಮಟ್ಟದ ಈ ಕಚ್ಚಾ ತೈಲ ಮತ್ತು ಅನಿಲ ದರಗಳ ಏರಿಕೆಯೇ ಪ್ರಸ್ತುತ ದೇಶೀಯ ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿದೆ.
ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾನದಂಡದ ದರಗಳು ಮತ್ತು ವಿದೇಶಿ ವಿನಿಮಯ ದರದಲ್ಲಿನ (ಡಾಲರ್ ಎದುರು ರೂಪಾಯಿ ಮೌಲ್ಯ) ಏರಿಳಿತಗಳನ್ನು ಆಧರಿಸಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ವಾಣಿಜ್ಯ ಎಲ್‌ಪಿಜಿ ಬೆಲೆಗಳನ್ನು ಪರಿಷ್ಕರಿಸುತ್ತವೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement