ಅಮೃತ ಮಹೋತ್ಸವ ಸಂಭ್ರಮದಲ್ಲಿ ಶಿಕ್ಷಣ ಪ್ರೇಮಿ ಡಾ. ಅಜಿತಪ್ರಸಾದ

(ಇಂದು (೦೫-೦೪-೨೦೨೬) ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್. ಆವರಣದಲ್ಲಿರುವ ಸನ್ನಿಧಿ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ ೦೯: ೩೦ಕ್ಕೆ ಡಾ. ಅಜಿತಪ್ರಸಾದ ಅಮೃತ ಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಲೋಕಾರ್ಪಣೆಯಾಗುತ್ತಿದೆ. ಈ ನಿಮಿತ್ತ ಲೇಖನ)
ಧಾರವಾಡದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಜನತಾ ಶಿಕ್ಷಣ ಸಮಿತಿ(ಜೆಎಸ್‌ಎಸ್‌)ಯು ಇಂದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮನ್ನಣೆ ಗಳಿಸುವಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ ಅವರ ಕೊಡುಗೆ ಅಪಾರವಾಗಿದೆ.
ಮೇಲ್ನೋಟಕ್ಕೆ ಒಬ್ಬ ಸಾಮಾನ್ಯ ಹಿರಿಯ ವ್ಯಕ್ತಿಯಂತೆ ಕಂಡರೂ ಕೂಡ ಅವರಲ್ಲಿ ಅಗಾಧ ಜಾಣ್ಮೆ ಮತ್ತು ಸೂಕ್ಷ್ಮ ಗ್ರಹಿಕೆಯಂತಹ ಗುಣಗಳು ಎಲ್ಲರನ್ನೂ ಸೆಳೆಯುತ್ತದೆ..
ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಅಜಿತ ಪ್ರಸಾದ ಅವರು ೧೯೫೨ರ ಏಪ್ರಿಲ್ ೬ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಬಳಿಯ ಧರೆಗುಡ್ಡೆಯ ದಿವಂಗತ ಕೆ. ಆದಿರಾಜ ಮತ್ತು ದಿವಂಗತ ಶ್ರೀಮತಿ ಅನಂತಮತಿಯವರ ಪುತ್ರರಾಗಿ ಜನಿಸಿದ್ದಾರೆ.
ಧರೆಗುಡ್ಡೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮೂಡಬಿದರೆಯಲ್ಲಿ ಪ್ರೌಢ ಶಿಕ್ಷಣ ಮತ್ತು ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ೧೯೭೪-೭೬ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಅಥಶಾಸ್ತ್ರದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದುಕೊಂಡು, ಜೆ.ಎಸ್.ಎಸ್. ಪದವಿ ಮಹಾವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆಯನ್ನು ಆರಂಭಿಸಿದರು.
೧೯೯೭ ರಲ್ಲಿ ಡಾ. ರಘುನಾಥ ಭಟ್ ಅವರ ಮಾರ್ಗದರ್ಶನದಲ್ಲಿಕರ್ನಾಟಕ ವಿಶ್ವವಿದ್ಯಾಲಯದಿಂದ ಧಾರವಾಡ ಪ್ರದೇಶಗಳಲ್ಲಿ ಜೈನ ಧರ್ಮ ಒಂದು ಸಾಂಸ್ಕೃತಿಕ ಅಧ್ಯಯನ ಕುರಿತು ಪಿ.ಎಚ್.ಡಿ. ಪದವಿ ಪಡೆದರು. ೨೦೦೫ ರಿಂದ ೨೦೧೧ರ ವರೆಗೆ ಜೆ.ಎಸ್.ಎಸ್. ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು.

ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರದ ಸಂಯೋಜಕರಾಗಿ ಮತ್ತು ಸಂಸ್ಥೆಯ ಹಣಕಾಸು ಅಧಿಕಾರಿಯಾಗಿ ಕಾರ್ಯಮಾಡಿದ್ದಾರೆ. ಸಂಸ್ಥೆಯ ಸ್ನಾತಕೋತ್ತರ ಕೇಂದ್ರದ ಪ್ರಾಚಾರ್ಯರಾಗಿ, ಸೆಪ್ಟೆಂಬರ್ ೮, ೨೦೨೨ ರಿಂದ ಕಾರ್ಯದರ್ಶಿಯಾಗಿ ಕಾರ್ಯಮಾಡುತ್ತಾ ಗುಣಾತ್ಮಕ ಶಿಕ್ಷಣ ಮತ್ತು ಸೇವೆಗೆ ಸಂಸ್ಥೆಯನ್ನು ಅಣಿಗೊಳಿಸಿದ್ದಾರೆ.
ವ್ಯಾಪಕವಾದ ಅಧ್ಯಯನಶೀಲತೆಯಿಂದ ಶ್ರವಣಬೆಳಗೊಳ (೧೯೮೧), ಕರ್ನಾಟಕ ಗತವೈಭವ (೨೦೦೮), ಅವಿಭಜಿತ ಧಾರವಾಡ ಜಿಲ್ಲೆಯ ಜೈನ ಇತಿಹಾಸ ಮತ್ತು ಪುರಾತತ್ವ (೨೦೨೫) ಕೃತಿಗಳು ಪ್ರಕಟವಾಗಿವೆ.
ಇವರ ಸಂಪಾದಕತ್ವದಲ್ಲಿ ಶಿಕ್ಷಣ ಸಮ್ಮಾನ (೧೯೯೯), ಸಮಗ್ರ ಶಿಕ್ಷಣದೆಡೆಗೆ (೨೦೦೩), ಚೆನ್ನುಡಿ (ಭಾಗ ೧ರಿಂದ ೭) ಜೀವನ ಶಿಕ್ಷಣ, ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅರವತ್ತರ ಸಂಭ್ರಮ (೨೦೦೯), ಕರ್ನಾಟಕ ಕೈಪಿಡಿ, ಮಗಳಿಗೊಂದು ಪತ್ರ (ಭಾಗ ೧-೩) ನಮ್ಮ ಹೆಮ್ಮೆ ನಮ್ಮ ಖಾವಂದರು (೨೦೨೬) ಮುಂತಾದ ಕೃತಿಗಳು ಪ್ರಕಟಗೊಂಡಿವೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡಿರುವ ಇವರು ತಮ್ಮ ಸೇವೆಯನ್ನು ಶೈಕ್ಷಣಿಕ ವಲಯಕ್ಕೆ ಸೀಮಿತಗೊಳಿಸಿ, ವಿದ್ಯಾಸಂಸ್ಥೆಗಳನ್ನು ಬೆಳೆಸುವ ಜೊತೆ ಜೊತೆಗೆ ಯಾವ ರೀತಿ ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜಮುಖಿಯಾಗಿ ಸೇವೆ ಸಲ್ಲಿಸಬಹುದೆಂದು ತೋರಿಸಿದ್ದಾರೆ.
ಧಾರವಾಡ ಶಹರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವಾರು ರಕ್ತದಾನ ಮತ್ತು ಆರೋಗ್ಯ ತಪಾಸಣೆ, ಶಿಬಿರಗಳ ಆಯೋಜನೆ, ಮಹಿಳೆಯರಿಗಾಗಿ ರ‍್ಯಾಪಿಡ್ ಸಂಸ್ಥೆಯ ಸಹಯೋಗದಲ್ಲಿ ಬೃಹತ್ ಮಹಿಳಾ ಉದ್ಯೋಗ ಮೇಳ ಆಯೋಜನೆ, ಹೊಲಿಗೆ, ಕಸೂತಿ, ಬೇಕರಿ, ಉತ್ಪನ್ನಗಳ ತಯಾರಿಕೆ, ತರಬೇತಿ ಶಿಬಿರ, ಸ್ವ ಉದ್ಯೋಗ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ.
ಆಟವಿರಲಿ, ಪಾಠವಿರಲಿ, ಸಾಂಸ್ಕೃತಿಕ ಚಟುವಟಿಕೆ ಇರಲಿ, ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದಲ್ಲಿ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರ ಫಲವಾಗಿ ಕಳೆದ ೧೩ ವರ್ಷಗಳಿಂದ ಜೆ.ಎಸ್.ಎಸ್. ಕಾಲೇಜು ಕರ್ನಾಟಕ ವಿವಿ ಅಥ್ಲೆಟಿಕ್ಸ್ ಪಂದ್ಯಾವಳಿಗಳಲ್ಲಿ ವೀರಾಗ್ರಣಿಯಾಗಿ ಹೊರಹೊಮ್ಮಿದೆ. ಅತ್ಯುತ್ತಮ ಪ್ರತಿಭಾವಂತ ಕ್ರೀಡಾಪಟುಗಳಿಗೆ ಈವರೆಗೆ ೪೦ ಲಕ್ಷ ರೂ. ಶಿಷ್ಯವೇತನ ಕೊಡಮಾಡಿದ್ದಾರೆ.
೨೦೦೫ರಿಂದ ಈ ವರೆಗೆ ೩೦೦ಕ್ಕೂ ಹೆಚ್ಚಿನ ಕ್ಯಾಂಪಸ್ ಸಂದರ್ಶನದ ಸೌಲಭ್ಯ ಕಲ್ಪಿಸುವ ಮೂಲಕ ೬೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಿಕೊಟ್ಟಿರುತ್ತಾರೆ.

ಪ್ರಮುಖ ಸುದ್ದಿ :-   ಕುಮಟಾ: ಭಾರಿ ಮಳೆಗೆ ಗೋಕರ್ಣ–ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ

೨೫ ಶಿಕ್ಷಣ ಸಂಸ್ಥೆಗಳ ೧೩೦೦ ಸಿಬ್ಬಂದಿ ಮತ್ತು ೨೫,೦೦೦ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ್ದಾರೆ. ಇವರ ಶೈಕ್ಷಣಿಕ ಮತ್ತು ಸಮಾಜಪರ ಚಟುವಟಿಕೆಗಳಿಂದಾಗಿ ಇವರನ್ನು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವುಗಳಲ್ಲಿ ಅಜಂತಾ ರಾಷ್ಟ್ರರತ್ನ, ಧೀಮಂತ ವ್ಯಕ್ತಿ, ವಿದ್ಯಾ-ವಿಕಾಸ ಪ್ರಶಸ್ತಿ, ಶಾಲ್ಮಲಾ ಸಂಪದ ಪ್ರಶಸ್ತಿ, ಕಾಯಕಯೋಗಿ, ಹು-ಧಾ ಮಹಾನಗರ ಪಾಲಿಕೆಯ ಧಿಮಂತ ಪ್ರಶಸ್ತಿ, ಅಂತಃಕರಣ, ಸಾಂತ್ವನ, ಸಮಾಜ ಸೇವಾ ಭೂಷಣ, ಸ್ನೇಹಜೀವಿ ಅತ್ಯುತ್ತಮ ಸಂಘಟನಕಾರ ಮುಂತಾದ ಪ್ರಶಸ್ತಿಗಳು ಪ್ರಮುಖವಾಗಿವೆ.
ತಾಳ್ಮೆಗೆ ಇನ್ನೊಂದು ಹೆಸರಾದ ಡಾ. ಅಜಿತಪ್ರಸಾದ ಅವರು. ಸಮುದಾಯ-ಸರ್ಕಾರ- ಸಂಸ್ಥೆಗಳ ನಡುವೆ ಸೇತುವೆಯಾಗಿ ಧಾರವಾಡಕ್ಕೊಂದು ಕೀರ್ತಿ ತಂದಿದ್ದಾರೆ. ಶಿಸ್ತು, ಸಂಯಮ, ಸಮಯ ನಿಷ್ಠೆ ಅವರ ಜೀವನದ ಪ್ರಮುಖ ಅಂಶಗಳಾಗಿವೆ. ಗುಣಗ್ರಾಹಿಯಾದ ಅವರು ಪ್ರತಿಭಾವಂತರನ್ನು ಗುರುತಿಸಿ ಆಮಂತ್ರಿಸಿ, ಗೌರವಿಸುತ್ತಿರುವುದು ವಿಶೇಷವಾಗಿದೆ. ನಿರಂತರವಾಗಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ಪುಸ್ತಕಗಳ ಪ್ರಕಟಣೆ, ಬಿಡುಗಡೆ ಮತ್ತು ಸಂದರ್ಭ ಯೋಜಿತ ಸಮ್ಮೇಳನಗಳನ್ನು ಆಯೋಜಿಸುತ್ತಾ ಬಂದಿದ್ದಾರೆ.
ಪೂಜ್ಯರಾದ ಕೃಷ್ಣೆೈಕ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ಧರ್ಮಸ್ಥಳ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಡಾ. ಎನ್. ವಜ್ರಕುಮಾರ, ಪತ್ನಿ ವಾಣಿಪ್ರಸಾದ, ಪುತ್ರ ಅರಿಹಂತ,  ಸೊಸೆ ಶೃತಿ,    ಪುತ್ರಿ ಕ್ಷಮಾ, ಅಳಿಯ ಪ್ರಸಾದ ಮೊಮ್ಮಕ್ಕಳಾದ ರಿಜಿತ್, ಅಥೇನಾ, ಪ್ರಾಶುಖ ಮತ್ತು ಪ್ರಾಚಿ ಹಾಗೂ ಬಂಧುಗಳು, ಹಿತೈಷಿಗಳು, ಸಿಬ್ಬಂದಿಗಳನ್ನು, ಸ್ನೇಹಿತರನ್ನು ಸದಾ ನೆನೆಯುತ್ತಾರೆ.
-ಡಾ. ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement