ಬೆಂಗಳೂರು : ಪ್ರಸಕ್ತ ಮುಂಗಾರಿನ ಅವಧಿಯಲ್ಲಿ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಿದೆ. ಮಳೆಯ ಕಾರಣಕ್ಕೆ 58 ಜನರು ಮೃತಪಟ್ಟಿದ್ದಾರೆ. ಈ ಒಟ್ಟಾರೆ 80,000 ಹೆಕ್ಟೇರ್ ಬೆಳೆ ನಾಶವಾಗಿದ್ದು, ವಾರದೊಳಗಾಗಿ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಮಳೆ ಪ್ರಮಾಣದ ವಿವರ, ಮಳೆಯಿಂದಾದ ಹಾನಿ ಹಾಗೂ ಇಲಾಖೆ ಕೈಗೊಂಡಿರುವ ಪರಿಹಾರ ಕಾರ್ಯಗಳ ಕುರಿತು ಅವರು ಮಾಹಿತಿ ನೀಡಿದರು. “ಉತ್ತರ ಒಳನಾಡಿನಲ್ಲಿ ವಾಡಿಕೆಯಂತೆ 260 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಪ್ರಸ್ತುತ 322 ಮಿ.ಮೀ ಮಳೆಯಾಗಿದೆ. ಅಂದರೆ ವಾಡಿಕೆಗಿಂತ ಶೇ24ರಷ್ಟು ಹೆಚ್ಚು ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ವಾಡಿಕೆಯಂತೆ 1127 ಮಿ.ಮೀ ಮಳೆಯಾಗಬೇಕಿತ್ತು, ಆದರೆ ಪ್ರಸ್ತುತ 1361 ಮಿ.ಮೀ ಮಳೆಯಾಗಿದೆ. ಅಂದರೆ ಶೇ.21ರಷ್ಟು ಹೆಚ್ಚು ಮಳೆಯಾಗಿದೆ. ಕರಾವಳಿ ಭಾಗದಲ್ಲಿ ವಾಡಿಕೆಯಂತೆ 2299 ಮಿ.ಮೀ ಯಾಗಬೇಕಿತ್ತು, ಆದರೆ, ಪ್ರಸ್ತುತ 2947 ಮಿಮೀ ಮಳೆಯಾಗಿದೆ. ಅಂದರೆ ಶೇ.28ರಷ್ಟು ಮಳೆಯಾಗಿದೆ. ರಾಜ್ಯಾದ್ಯಂತ ವಾಡಿಕೆಯಂತೆ ಮಳೆಯ ಪ್ರಮಾಣ 553 ಮಿ.ಮೀ ಆಗಬೇಕಿತ್ತು, ಪ್ರಸ್ತುತ 699 ಮಿ.ಮೀ ಮಳೆಯಾಗಿದ್ದು, ಇದು ಶೇ.26ರಷ್ಟು ಹೆಚ್ಚು ಎಂದು ತಿಳಿಸಿದರು.
ಕಳೆದ ತಿಂಗಳು ಬಯಲುಸೀಮೆಯ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಿತ್ತು. ಕೋಲಾರ, ಚಿಕ್ಕಬಳ್ಳಾಪುರ ಯಾದಗಿರಿ ಕೊಪ್ಪಳ, ವಿಜಯಪುರ, ರಾಯಚೂರು ಪ್ರದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಆದರೆ, ಕಳೆದ 10 ದಿನಗಳ ಹಿಂದೆ ಆ ಭಾಗಗಳಲ್ಲೂ ಸಹ ಉತ್ತಮ ಮಳೆಯಾಗಿದೆ. ಅಲ್ಲದೆ, ಆಗಸ್ಟ್ 16 ರಿಂದ ಮುಂಗಾರು ಮತ್ತೆ ಚುರುಕಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮುಂಗಾರಿನ ಪ್ರಭಾವ ಉತ್ತಮವಾಗಿರುವ ಬಗ್ಗೆ ಮಾಹಿತಿ ಇದೆ. ಈ ವರ್ಷ ವಾಡಿಕೆಗಿಂತಲೂ ಭಿತ್ತನೆಯೂ ಹೆಚ್ಚಾಗಿದ್ದು, ಒಳ್ಳೆಯ ಕೃಷಿ ಚಿತ್ರಣ ಕಾಣುವ ನಿರೀಕ್ಷೆ ಇದೆ” ಎಂದು ಅವರು ಮಾಹಿತಿ ನೀಡಿದರು.
ಮುಂಗಾರಿನ ಪ್ರಭಾವ ಇನ್ನೂ ಒಂದೂವರೆ ತಿಂಗಳು ಇರಲಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಹಿಡಿದು ಮಧ್ಯ ಕರ್ನಾಟಕ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಭಾಗ ಹಾಗೂ ಕೃಷ್ಣ-ಕಾವೇರಿ ನದಿಪಾತ್ರದ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಈ ಎಲ್ಲಾ ಭಾಗದಲ್ಲೂ ಅನಗತ್ಯ ನೆರೆಸ್ಥಿತಿ ತಡೆಯಲು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆಯಾಗುವ ಸಂದರ್ಭದಲ್ಲಿ ನದಿ ಉಕ್ಕಿಹರಿಯುತ್ತದೆ, ಇದೇ ವೇಳೆ ಅಣೆಕಟ್ಟೆಗಳಿಂದಲೂ ನೀರು ಹರಿಸಿದರೆ ಪ್ರವಾಹ ಸ್ಥಿತಿ ಉಂಟಾಗುತ್ತದೆ. ಹೀಗಾಗಿ ಅಣೆಕಟ್ಟೆಗಳು ತುಂಬುವವರೆಗೂ ಕಾಯದೆ ಜಲಾಶಯಗಳ ಒಳಹರಿವನ್ನು ನಿಯಮಿತವಾಗಿ ನಿರ್ವಹಣೆ ಮಾಡಿ, ನೀರನ್ನು ಬಿಡುಗಡೆ ಮಾಡುವ ಮೂಲಕ ನೆರೆಯನ್ನು ನಿಯಂತ್ರಿಸಬಹುದು. ಈ ಮಾದರಿಯ ನೀರಿನ ನಿರ್ವಹಣೆ ಬಗ್ಗೆಯೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನಿಮ್ಮ ಕಾಮೆಂಟ್ ಬರೆಯಿರಿ