ಕೊಪ್ಪಳ: ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡಲಾರದಷ್ಟು ಶೋಚನಿಯ ಸ್ಥಿತಿಗೆ ಬಿಜೆಪಿ ತಲುಪಿದೆ. ರಾಜ್ಯಾಧ್ಯಕ್ಷರ ಆಯ್ಕೆ ಮಾಡಲಾಗದಷ್ಟು ಅಸಮರ್ಥವಾಗಿದೆ. ನಮ್ಮಂಥ ಹಿರಿಯರನ್ನು ಹೊರಗೆ ಕಳುಹಿಸಿದ ನಂತರ ಏನಾಗಿದೆ ಎಂಬುದು ಈಗ ಗೊತ್ತಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಹೀಗಾಗಿ ನನ್ನನ್ನು ಕರೆದರೂ ಮತ್ತೆ ಅಲ್ಲಿಗೆ ಹೋಗುವುದಿಲ್ಲ. ಬಿಜೆಪಿ ನನ್ನನ್ನು ಯಾವ ರೀತಿ ಅಮಾವನಕರವಾಗಿ ನಡೆದುಕೊಂಡಿತು ಎಂಬುದು ಗೊತ್ತಿದೆ. ಈಗ ಅವರೇ ನನ್ನನ್ನು ಹೊರ ಹಾಕಿದರು. ಬಿಜೆಪಿ ಹಠಕ್ಕೆ ಬಿದ್ದು ನನ್ನ ಸೋಲಿಸಲು ಹೋಗಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ ಪ್ರೀತಿ ವಿಶ್ವಾಸದಿಂದ ಕಾಂಗ್ರೆಸ್ ನಡೆಸಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಯತ್ನ ಮಾಡುತ್ತೇನೆ ಎಂದರು.ಈಗ ತತ್ವ ಸಿದ್ಧಾಂತ ಯಾವುದೇ ಪಕ್ಷದಲ್ಲಿ ಉಳಿದಿಲ್ಲ. ಜನಸಂಘದ ತತ್ವ ಸಿದ್ಧಾಂತ ಈಗ ಬಿಜೆಪಿಯಲ್ಲಿ ಇಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ವಿಧಾನಸಭೆ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ಕೊಟ್ಟಿದ್ದು, ಈ ಆಧಾರದಲ್ಲಿ ನನ್ನ ರಾಜಕೀಯ ಅನುಭವದ ಮೇಲೆ ಹೇಳುವುದಾದರೆ ಕಾಂಗ್ರೆಸ್ ಹೆಚ್ಚು ಸ್ಥಾನದಲ್ಲಿ ಗೆಲ್ಲಲಿದೆ. ಬಿಜೆಪಿಗೆ ಹೀನಾಯ ಸ್ಥಿತಿ ಎದುರಾಗಿದೆ. ನನ್ನ ಅನುಭವದ ಪ್ರಕಾರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 15ರಿಂದ 20 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಇರುತ್ತಾರೆ ಎಂದರು.


ನಿಮ್ಮ ಕಾಮೆಂಟ್ ಬರೆಯಿರಿ