ಬಿಹಾರದಲ್ಲಿ ವಿದ್ಯುತ್ ನಿಲುಗಡೆ ವಿರೋಧಿಸಿ ಪ್ರತಿಭಟನೆ : ಪೊಲೀಸರ ಗೋಲಿಬಾರ್‌ನಲ್ಲಿ ಓರ್ವ ಸಾವು, ಇಬ್ಬರಿಗೆ ಗಾಯ

ಪಾಟ್ನಾ : ವಿದ್ಯುತ್ ಇಲಾಖೆಯ ವಿರುದ್ಧ ಬಿಹಾರದ ಕತಿಹಾರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಗುಂಪನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.
ಕತಿಹಾರ್‌ನ ಬರ್ಸೋಯಿ ಪಟ್ಟಣದ ಸಮೀಪವಿರುವ ಗ್ರಾಮದ ನಿವಾಸಿಗಳು ಅನಿಯಮಿತ ವಿದ್ಯುತ್ ಪೂರೈಕೆ ಮತ್ತು ಹೆಚ್ಚಿನ ವಿದ್ಯುತ್ ದರಗಳ ವಿರುದ್ಧ ವಿದ್ಯುತ್ ಇಲಾಖೆಯ ಹೊರಗೆ ಜಮಾಯಿಸಿದರು. ಜನಸಮೂಹವು ವಿದ್ಯುತ್ ಇಲಾಖೆಯ ಕಚೇರಿಗೆ ಕಲ್ಲು ತೂರಾಟ ನಡೆಸಿ ಧ್ವಂಸಗೊಳಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು ಮತ್ತು ಗುಂಡು ಹಾರಿಸಿ ಗುಂಪನ್ನು ಚದುರಿಸಿದರು.
ಘಟನಾ ಸ್ಥಳದಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಇದ್ದಾರೆ. ಪೊಲೀಸರ ಗುಂಡಿಗೆ ಸಾವಿಗೀಡಾದ ವ್ಯಕ್ತಿಯನ್ನು ಮೊಹಮ್ಮದ್ ಖುರ್ಷಿದ್ (35) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಒಬ್ಬನನ್ನು ಪಶ್ಚಿಮ ಬಂಗಾಳದ ಸಿಲಿಗುರಿಗೆ ಕಳುಹಿಸಲಾಗಿದೆ ಮತ್ತು ಇನ್ನೊಬ್ಬನಿಗೆ ಕತಿಹಾರ್‌ನ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜನಸಮೂಹವು ದೊಣ್ಣೆಗಳು ಮತ್ತು ಕಲ್ಲುಗಳಿಂದ ಸಾರ್ವಜನಿಕ ಆಸ್ತಪಾಸ್ತಿಗಳಿಗೆ ಹಾನಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದಾಳಿಯಲ್ಲಿ ವಿದ್ಯುತ್ ಇಲಾಖೆಯ ಸುಮಾರು 12 ಅಧಿಕಾರಿಗಳು ಗಾಯಗೊಂಡಿದ್ದಾರೆ.
ಭಾರತೀಯ ಜನತಾ ಪಕ್ಷವು (ಬಿಜೆಪಿ) ನಿತೀಶಕುಮಾರ ನೇತೃತ್ವದ ಬಿಹಾರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು ಘಟನೆಯನ್ನು ಖಂಡಿಸಿದರು ಮತ್ತು ನಿತೀಶಕುಮಾರ ಅವರನ್ನು 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಹೊಣೆಗಾರ ಬ್ರಟೀಷ್‌ ಅಧಿಕಾರಿ ಜನರಲ್ ಡೈಯರ್‌ಗೆ ಹೋಲಿಸಿದ್ದಾರೆ.
ಬಿಹಾರದ ವಿರೋಧ ಪಕ್ಷದ ನಾಯಕ ವಿಜಯ್ ಸಿನ್ಹಾ ಮತ್ತು ಮಾಜಿ ಉಪಮುಖ್ಯಮಂತ್ರಿ ತಾರಕಿಶೋರ್ ಪ್ರಸಾದ್ ಕೂಡ ತಮ್ಮ ಕ್ರಮಗಳನ್ನು ಹಿಟ್ಲರ್‌ನಂತಹ ಸರ್ವಾಧಿಕಾರಿ ಮತ್ತು ದಬ್ಬಾಳಿಕೆಯ ಆಡಳಿತಕ್ಕೆ ಹೋಲಿಸಿ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement