ಬೆಂಗಳೂರು: ಎಲೆಕ್ಟ್ರಾನಿಕ್ ಮತಯಂತ್ರಗಳ (EVM) ಮೇಲೆ ಅನುಮಾನ ವ್ಯಕ್ತಪಡಿಸುತ್ತಾ ‘ಮತ ಕಳ್ಳತನ’ದ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ಅವರಿಗೆ ಈಗ ಸ್ವಪಕ್ಷದ ಸರ್ಕಾರವಿರುವ ಕರ್ನಾಟಕದಲ್ಲೇ ಇರಿಸುಮುರಿಸಾಗುವ ಸಮೀಕ್ಷೆ ಹೊರಬಿದ್ದಿದೆ. ರಾಜ್ಯ ಸರ್ಕಾರವೇ ನಡೆಸಿದ ಸಮೀಕ್ಷೆಯೊಂದರಲ್ಲಿ ಶೇ. 83ಕ್ಕೂ ಹೆಚ್ಚು ಜನ ಎವಿಎಂ ಮತಯಂತ್ರಗಳ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದು, ಇದನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಕರ್ನಾಟಕ ಉಸ್ತುವಾರಿ ಮತ್ತು ಮೌಲ್ಯಮಾಪನ ಪ್ರಾಧಿಕಾರ (KMEA) ನಡೆಸಿದ ‘ಲೋಕಸಭಾ ಚುನಾವಣೆ 2024 – ನಾಗರಿಕರ ಜ್ಞಾನ, ಮನೋಭಾವ ಮತ್ತು ಅಭ್ಯಾಸ (KAP) ಮೌಲ್ಯಮಾಪನ’ ಸಮೀಕ್ಷೆಯಲ್ಲಿ ಅಚ್ಚರಿಯ ಅಂಶಗಳು ಹೊರಬಂದಿವೆ.
ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. 84.55 ರಷ್ಟು ನಾಗರಿಕರು ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯುತ್ತವೆ ಎಂದು ಹೇಳಿದ್ದಾರೆ. ಶೇ. 83.61 ರಷ್ಟು ಜನರಿಗೆ ಇವಿಎಂಗಳ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ. ವಿಶೇಷವೆಂದರೆ, 2023 ರಲ್ಲಿ ಈ ಪ್ರಮಾಣ ಶೇ. 77.9 ರಷ್ಟಿತ್ತು, ಈಗ ಅದು ಹೆಚ್ಚಾಗಿದೆ. ಶೇ. 95.44 ರಷ್ಟು ಮತದಾರರು ತಮ್ಮ ಹೆಸರುಗಳು ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿವೆ ಎಂದು ಧೃಢಪಡಿಸಿದ್ದಾರೆ.
ಬಿಜೆಪಿ ನಾಯಕರ ಆಕ್ರೋಶ:
ಈ ಸಮೀಕ್ಷಾ ವರದಿಯನ್ನು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲ, “ರಾಹುಲ್ ಗಾಂಧಿ ಅವರು ಇವಿಎಂ ಮತ್ತು ಚುನಾವಣಾ ಆಯೋಗದ ಬಗ್ಗೆ ಸದಾ ಸುಳ್ಳು ಹೇಳುತ್ತಾರೆ. ಆದರೆ ಈಗ ಅವರದ್ದೇ ಪಕ್ಷದ ಸರ್ಕಾರ ಅವರಿಗೆ ಸತ್ಯದರ್ಶನ ಮಾಡಿಸಿದೆ ಎಂದು ಲೇವಡಿ ಮಾಡಿದ್ದಾರೆ.
ವಿಪಕ್ಷದ ನಾಯಕ ಆರ್. ಅಶೋಕ ಪ್ರತಿಕ್ರಿಯಿಸಿ, “ಇದು ಕಾಂಗ್ರೆಸ್ ಪಕ್ಷಕ್ಕೆ ಆದ ಕಪಾಳಮೋಕ್ಷ. ಸೋತಾಗ ವ್ಯವಸ್ಥೆಯನ್ನು ದೂಷಿಸುವ ಮತ್ತು ಗೆದ್ದಾಗ ಸಂಭ್ರಮಿಸುವ ಕಾಂಗ್ರೆಸ್‌ನದ್ದು ‘ಅನುಕೂಲಸಿಂಧು ರಾಜಕಾರಣ’. ಈ ನಾಟಕ ಪ್ರಜಾಪ್ರಭುತ್ವದ ಕಾಳಜಿಯಿಂದ ಬಂದಿದ್ದಲ್ಲ, ಸೋಲಿನ ಭಯದಿಂದ ಬಂದಿದ್ದು,” ಎಂದು ಕಿಡಿಕಾರಿದ್ದಾರೆ.
ಸಮೀಕ್ಷೆ ನಡೆದಿದ್ದು ಹೇಗೆ?
ರಾಜ್ಯದ 102 ವಿಧಾನಸಭಾ ಕ್ಷೇತ್ರಗಳ ಒಟ್ಟು 5,100 ಜನರಿಂದ ಈ ಸಮೀಕ್ಷೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಲೋಕಸಭಾ ಚುನಾವಣೆ 2024 ರ ಹಿನ್ನೆಲೆಯಲ್ಲಿ ಮತದಾರರ ಜಾಗೃತಿ ಮತ್ತು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಅಳೆಯಲು ಈ ಅಧ್ಯಯನ ನಡೆಸಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ