ಕೆಆರ್‌ಎಸ್ ಅಣೆಕಟ್ಟು ಸುತ್ತಮುತ್ತ ಅಕ್ರಮ ಗಣಿಗಾರಿಕೆ ದಾಖಲೆ ನೀಡಿದರೆ ಸಮಗ್ರ ತನಿಖೆ:ಸಚಿವ ನಿರಾಣಿ

ಕಲಬುರಗಿ:ಮಂಡ್ಯ ಜಿಲ್ಲೆ ಬೇಬಿಬೆಟ್ಟದ ಸುತ್ತಮುತ್ತಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅವರ ಬಳಿ ದಾಖಲೆಗಳಿದ್ದರೆ ಸರ್ಕಾರಕ್ಕೆ ನೀಡಿದರೆ ನಾವು ಸಮಗ್ರ ತನಿಖೆಗೆ ಆದೇಶ ಮಾಡುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ್ ನಿರಾಣಿ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗಿರುವ ಮಾಹಿತಿಯಂತೆ ಕಳೆದ ನಾಲ್ಕು ತಿಂಗಳಿನಿಂದ ಕೆಆರ್‍ಎಸ್ ಅಣೆಕಟ್ಟಿನ ಸುತ್ತಲ ಭಾಗ ಇಲ್ಲವೇ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ, ನಡೆಯುತ್ತಿರುವುದನ್ನು ನಿಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದ ನಂತರ ನಾನೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೆ. ಕೆಲವರು ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಅದನ್ನು ಸ್ಥಗಿತಗೊಳಿಸಲು ಸೂಚನೆ ಕೊಟ್ಟಿದ್ದೆ ಎಂದರು.
ಅಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದುದರಿಂದಲೇ ಅಂಥವರಿಗೆ ದಂಡ ವಿಧಿಸಿ ಯಾವುದೇ ತರಹದ ಚಟುವಟಿಕೆಗಳು ನಡೆಯದಂತೆ ನಿರ್ಬಂಧ ಹಾಕಲಾಗಿದೆ. ಒಂದು ವೇಳೆ ಈಗಲೂ ಅಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಚಟುವಟಿಕೆಗಳು ನಡೆಯುತಿರುವುದರ ಬಗ್ಗೆ ದಾಖಲೆಗಳಿದ್ದರೆ ಸರ್ಕಾರಕ್ಕೆ ನೀಡಲಿ. ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಕೆಆರ್ ಎಸ್ ಅಣೆಕಟ್ಟು ಸುತ್ತಮುತ್ತ ಸುಮಾರು 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸದಂತೆ ಕಾನೂನು ಕೈಗೊಳ್ಳಲಾಗಿದ್ದು, ಅಧಿಕಾರಿಗಳಿಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಸೂಚನೆ ಕೊಡಲಾಗಿದೆ ಎಂದರು. 70 ವರ್ಷಗಳಿಂದಲೂ ಇಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಲೇ ಇದೆ. ಹೀಗಾಗಿ ಯಾವ ರಾಜಕಾರಣಿಗಳು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದನ್ನುಹೇಳುವುದು ಕಷ್ಟ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಾಕ್ಸಮರದ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಇಬ್ಬರ ಬಗ್ಗೆಯೂ ಅಪಾರ ಗೌರವವಿದೆ. ಹಾದಿಬೀದಿಯಲ್ಲಿ ಜಗಳ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇಬ್ಬರೂ ಬುದ್ಧಿವಂತರು. ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಈಗ ನಡೆಯುತ್ತಿರುವ ಸಂಘರ್ಷಕ್ಕೆ ಅವರು ಪೂರ್ಣ ವಿರಾಮ ಹಾಕಬೇಕು. ಹಿರಿಯರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿದರು.

ಪ್ರಮುಖ ಸುದ್ದಿ :-   ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ, ಬೇರೆ ಯಾರಿಗೂ ಕೊಟ್ಟಿಲ್ಲ : ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ ಹೇಳಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement