ನಕ್ಸಲ್ ನಂಟಿನ ಪ್ರಕರಣ: ವಿಠಲ ಮಲೆಕುಡಿಯ, ಅವರ ತಂದೆ ನಿರ್ದೋಷಿ ಎಂದು ಖುಲಾಸೆಗೊಳಿಸಿದ ನ್ಯಾಯಾಲಯ

ಮಂಗಳೂರು: ನಕ್ಸಲ್‌ ನಂಟಿನ ಆರೋಪ ಪ್ರಕರಣದಲ್ಲಿ ಅಂದಿನ ಪತ್ರಿಕೋದ್ಯಮ ವಿದ್ಯಾರ್ಥಿ ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ನಿರ್ದೋಷಿಗಳು ಎಂದು ಮಂಗಳೂರು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿದೆ.
ನಕ್ಸಲ್‌ ನಂಟಿನ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಸಮೀಪದ ಕುತ್ಲೂರು ನಿವಾಸಿ ಹಾಗೂ ಡಿವೈಎಫ್‌ಐ ಹಾಗೂ ಆದಿವಾಸಿ ಹಕ್ಕಗಳ ಸಮನ್ವಯ ಸಮಿತಿ ಸಕ್ರಿಯ ಕಾರ್ಯಕರ್ತರಾಗಿದ್ದ ವಿಠಲ ಹಾಗೂ ಅವರ ತಂದೆಯನ್ನು 9 ವರ್ಷಗಳ ಹಿಂದೆ ಬಂಧಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರಾದ ಬಿ. ಬಿ. ಜಕಾತಿ ತೀರ್ಪು ನೀಡಿದ್ದಾರೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ. ವಿಠಲ ಅವರ ಪರವಾಗಿ ವಕೀಲ ದಿನೇಶ್‌ ಹೆಗ್ಡೆ ಉಳೆಪಾಡಿ ವಾದ ಮಂಡಿಸಿದ್ದರು.
ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಪ್ಪ ಅವರನ್ನು 2012ರ ಮಾರ್ಚ್‌ 3ರಂದು ಬಂಧಿಸಲಾಗಿತ್ತು. ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ವಿಠಲ ಅವರು ಕುತ್ಲೂರಿಗೆ ಬಂದಿದ್ದ ವೇಳೆ ನಕ್ಸಲ್‌ ನಿಗ್ರಹ ದಳ ಅವರನ್ನು ಬಂಧಿಸಿತ್ತು. ಆ ವೇಳೆ ಮನೆಯಿಂದ ಭಗತ್‌ ಸಿಂಗ್‌ ಜೀವನ ಚರಿತ್ರೆ ಇರುವ ಗ್ರಂಥ, ಆಟಿಕೆಯ ಬೈನಾಕ್ಯುಲರ್‌, ಪಾತ್ರೆಗಳು, ಚಹಾಪುಡಿ , ಸಕ್ಕರೆ ಇತ್ಯಾದಿ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
2012ರ ಜೂನ್‌ 6ರಂದು ಬೆಳ್ತಂಗಡಿ ನ್ಯಾಯಾಲಯ ಜಾಮೀನು ನೀಡಿತ್ತು. ಬಳಿಕ ಪತ್ರಿಕೋದ್ಯಮ ಪದವಿ ಪೂರೈಸಿದ ಅವರು ಕನ್ನಡದ ದಿನಪತ್ರಿಕೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಕರಣದ ಮೊದಲ ಆರೋಪಿಯಾಗಿ ನಕ್ಸಲ್‌ ನಾಯಕ ವಿಕ್ರಂಗೌಡ ಅವರನ್ನು ಹೆಸರಿಸಲಾಗಿತ್ತು. ಉಳಿದ ಆರೋಪಿಗಳಾದ ಪ್ರದೀಪ್‌, ಜಾನ್‌ ಸುಂದರಿ ಹಾಗೂ ಪ್ರಭಾ ಅವರ ಜೊತೆಗೆ ವಿಠಲ ಮತ್ತು ಅವರ ತಂದೆಯನ್ನು ಕೂಡ ಶಂಕಿತ ನಕ್ಸಲೀಯರೆಂದು ಪಟ್ಟಿ ಮಾಡಿ ಆರೋಪಗಳನ್ನು ಹೊರಿಸಲಾಗಿತ್ತು. ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ವಿಠಲ ಮತ್ತು ಅವರ ತಂದೆ ಕ್ರಮವಾಗಿ ಆರು ಮತ್ತು ಏಳನೇ ಆರೋಪಿಗಳಾಗಿದ್ದರು. ಈ ಬಂಧನ ಪ್ರಕರಣ ರಾಷ್ಟ್ರಾದ್ಯಂತ ಸುದ್ದಿ ಮಾಡಿತ್ತು. ಪ್ರಕರಣ ಸಂಸತ್ತಿನಲ್ಲಿಯೂ ಮಾರ್ದನಿಸಿತ್ತು.

ಪ್ರಮುಖ ಸುದ್ದಿ :-   ಕಡೂರು| ದುಷ್ಕರ್ಮಿಗಳಿಂದ ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement