ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಮಾಧಿಗೆ ಇಂದು ಕುಟುಂಬಸ್ಥರು ಪೂಜೆ ಸಲ್ಲಿಸಿ ಹಾಲು, ತುಪ್ಪ ಕಾರ್ಯ ನೆರವೇರಿಸಿದರು.
ಪುನೀತ್ ನಿಧನರಾಗಿ ಇಂದಿಗೆ 5ನೇ ದಿನವಾಗಿದ್ದು, ನಗರದ ಕಂಠೀರವ ಸ್ಟುಡಿಯೋಗೆ ಸದಾಶಿವನಗರದಿಂದ 4 ಬಸ್‍ಗಳಲ್ಲಿ ಕುಟುಂಬಸ್ಥರು ಆಗಮಿಸಿದ್ದರು. ಅಪ್ಪು ಸಮಾಧಿಗೆ ಹೂವಿನಿಂದ ಅಲಂಕಾರಗೊಳಿಸಿ, ಅವರಿಗೆ ಇಷ್ಟವಾದಂತಹ ಪದಾರ್ಥಗಳನ್ನು ಮನೆಯಿಂದಲೇ ಮಡಿಯಾಗಿ ಮಾಡಿಕೊಂಡು ಬಂದು ಬಾಳೆ ಎಲೆಯಲ್ಲಿಟ್ಟು ಬಡಿಸಿ, ಹಾಲು, ತುಪ್ಪ ಕಾರ್ಯ ನೆರವೇರಿಸಿದರು.
ಇದೇ ವೇಳೆ ಪುತ್ರಿಯರಾದ ಧೃತಿ, ವಂದನಾ ಸೇರಿದಂತೆ ಕುಟುಂಬದ ಸದಸ್ಯರು ಸಮಾಧಿಗೆ ಪೂಜೆ ಸಲ್ಲಿಸಿ ಪುನೀತ್ ನೆನೆದು ಕಂಬನಿ ಮಿಡಿದರು. ಇಹಲೋಕ ತ್ಯಜಿಸಿದ ಸಹೋದರನಿಗೆ ಶಿವರಾಜಕುಮಾರ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರು ಪೂಜೆ ಸಲ್ಲಿಸಿದರು.
ಸೋದರ ಮಾವಂದಿರರಾದ ಚಿನ್ನೇಗೌಡ, ಎಸ್. ಎ. ಗೋವಿಂದ ರಾಜ್, ಸೇರಿದಂತೆ ಚಿತ್ರರಂಗದ ಗಣ್ಯರು ಈ ವೇಳೆ ಹಾಜರಿದ್ದು ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಾಘವೇಂದ್ರ ರಾಜಕುಮಾರ, ಈ ನೋವಿನ ಜೊತೆ ಬದುಕುವ ಶಕ್ತಿ ಕೊಡು ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ. ಈ ಎಲ್ಲದರ ನಡುವೆ ಹೇಗೆ ಬದುಕಬೇಕು ಅಂತ ತಿಳಿಯಬೇಕಾಗಿದೆ. ನನ್ನ ತಂದೆಗೆ ದೇವರು 75 ವರ್ಷ ಆಯಸ್ಸು ಕೊಟ್ಟ. ಪುನೀತ್‍ಗೆ 45 ವರ್ಷ ಕೊಟ್ಟ. ನಮಗೆ ಅವಕಾಶ ಕೊಟ್ಟಿದು ಇಷ್ಟೇ. ಅಪ್ಪು 2 ಕಣ್ಣುಗಳನ್ನು ನಾಲ್ಕು ಜನ ನೋಡುತ್ತಿದ್ದಾರೆ. ಅಪ್ಪಾಜಿ 2 ಕಣ್ಣು ಇಬ್ಬರಿಗೆ ನೀಡಿದರೆ ಅಪ್ಪು ಈಗ 4 ಜನರಿಗೆ ಕಣ್ಣು ನೀಡಿ ದಾಖಲೆ ಮಾಡಿದ್ದಾನೆ. ಇದು ಅಪ್ಪು ಸಾಧನೆಯಾಗಿದೆ. ನಮ್ಮ ಜೊತೆ ಇದ್ದ ಅಭಿಮಾನಿ, ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯಾವಾದಗಳು. ಅವರಿಗೆ ಎಷ್ಟೇ ಕೃತಜ್ಞತೆ ಹೇಳಿದರೂ ಕಡಿಮೆ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ