ನವದೆಹಲಿ: ಭಾರತದ ಜಲಾಂತರ್ಗಾಮಿ ನೌಕೆ ಬಗ್ಗೆ ಗೌಪ್ಯ ಮಾಹಿತಿಯನ್ನು ನೀಡಿದ ಆರೋಪದ ಮೇಲೆ ಆರು ಜನರ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಆರೋಪ ಪಟ್ಟಿ ಸಲ್ಲಿಸಿದೆ.
ಸಬ್ ಮೇರಿನ್ ಕುರಿತಾದ ಕೆಲವು ರಹಸ್ಯ ಮಾಹಿತಿಗಳನ್ನು ಇವರು ಅನಧಿಕೃತ ವ್ಯಕ್ತಿಗಳಿಗೆ ರವಾನಿಸಿದ್ದರು. ಈ ಆರೋಪದ ಮೇಲೆ ಇಬ್ಬರು ಕಮಾಂಡರ್‌ಗಳು ಮತ್ತು ಇಬ್ಬರು ನಿವೃತ್ತ ಭಾರತೀಯ ನೌಕಾಪಡೆ ಅಧಿಕಾರಿಗಳು ಸೇರಿದಂತೆ ಆರು ಜನರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಹಾಕಿದೆ.ಆರು ಜನರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನೌಕಾಪಡೆಯ ನಿವೃತ್ತ ಅಧಿಕಾರಿಗಳಾದ ರಣದೀಪ್ ಸಿಂಗ್ ಮತ್ತು ಎಸ್ ಜೆ ಸಿಂಗ್ ಅವರನ್ನು ಸೆಪ್ಟೆಂಬರ್ 3ರಂದು ಸಿಬಿಐ ಬಂಧಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಕಮೋಡೋರ್ ರಣದೀಪ್ ಸಿಂಗ್ (ನಿವೃತ್ತ) ಅವರ ಆಸ್ತಿಯಲ್ಲಿ ಶೋಧನೆಯಲ್ಲಿ ಸುಮಾರು 2 ಕೋಟಿ ರೂ ನಗದು ವಶಪಡಿಸಿಕೊಳ್ಳಲಾಗಿದೆ. ಸಿಬಿಐ ನಂತರ ಪಶ್ಚಿಮ ನೌಕಾ ಕಮಾಂಡ್ ಅಜಿತ್ ಕುಮಾರ್ ಪಾಂಡೆ ಅವರನ್ನು ಬಂಧಿಸಿದೆ. ಕಮಾಂಡರ್ ಪಾಂಡೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಕಮಾಂಡರನನ್ನು ಕೂಡ ಬಂಧಿಸಲಾಗಿದೆ.
ಈ ಇಬ್ಬರು ಕಮಾಂಡರ್‌ಗಳು ಕಿಲೋ ಕ್ಲಾಸ್ ಸಬ್‌ಮೆರಿನ್‌ಗಳನ್ನು ಮರು ಹೊಂದಿಸುವ ಬಗ್ಗೆ ಗೌಪ್ಯ ವಾಣಿಜ್ಯ ಮಾಹಿತಿಯನ್ನು ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನಿವೃತ್ತ ನೌಕಾಪಡೆಯ ಅಧಿಕಾರಿಗಳಿಗೆ ರವಾನಿಸುತ್ತಿದ್ದರು ಎಂಬ ಆರೋಪವಿದೆ..
ಈ ಪ್ರಕರಣದಲ್ಲಿ ರಿಯರ್ ಅಡ್ಮಿರಲ್ ಸೇರಿದಂತೆ ಕನಿಷ್ಠ 12ಕ್ಕೂ ಹೆಚ್ಚು ಮಂದಿಯನ್ನು ಪ್ರಶ್ನಿಸಲಾಗಿದೆ. ಬಂಧಿತ ಆರೋಪಿಗಳಿಗೆ ಜಾಮೀನು ಸಿಗದಂತೆ ತಡೆಯಲು ಸಿಬಿಐ ಇಂದು ಆರೋಪಪಟ್ಟಿ ಸಲ್ಲಿಸಲು ನಿರ್ಧರಿಸಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ