ಬೆಂಗಳೂರು: ಬಿಟ್ ಕಾಯಿನ್ ಹಗರಣದ ಸಂಬಂಧ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಬರೋಬ್ಬರಿ ೧೨ ಕಂಪನಿಗಳನ್ನು ಹ್ಯಾಕಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ಶ್ರೀಕಿ ಹ್ಯಾಕಿಂಗ್ ಮಾಡಿರುವ ಸಂಬಂಧಿಸಿದಂತೆ ೧೨ ಕಂಪನಿಗಳಿಗೆ ಸಿಸಿಬಿ ಅಧಿಕಾರಿಗಳು ವಿವರವಾದ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಹ್ಯಾಕರ್ ಶ್ರೀಕಿ ೧೨ ಕಂಪನಿಗಳ ವೆಬ್‌ಸೈಟ್ ಹ್ಯಾಕ್ ಮಾಡಿದ್ದು ಆತನ ವಿರುದ್ಧ ಇಂಟರ್ ಪೋಲ್ ನಿಂದ ಕ್ರಮಕೈಗೊಳ್ಳಿ ಎಂದು ನಗರ ಪೊಲೀಸ್ ಆಯುಕ್ತ ಅವರಿಗೆ ತನಿಖಾಧಿಕಾರಿ ಪತ್ರದ ಮೂಲಕ ಮನವಿ ಸಲ್ಲಿಸಿದ್ದರು.
ಲ್ಯಾಪ್‌ಟಾಪ್ ಸಿಐಡಿಗೆ:
ಈ ನಡುವೆ ಹೋಟೆಲ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತನಾಗಿದ್ದ ಹ್ಯಾಕರ್ ಶ್ರೀಕಿ ಬಳಸುತ್ತಿದ್ದ ಲ್ಯಾಪ್‌ಟಾಪ್‌ಅನ್ನು ಸಿಐಡಿಗೆ ರವಾನಿಸಲಾಗಿದೆ.
ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಶ್ರೀಕಿ ಹಾಗೂ ಭೀಮಾ ಜ್ಯುವೆಲರ್ಸ್ ಮಾಲೀಕರ ಮಗ ವಿಷ್ಣು ಭಟ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಹೋಟೆಲ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಜೀವನ್ ಭೀಮಾನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಸದ್ಯ ಜಾಮೀನಿನ ಮೇಲೆ ಶ್ರೀಕಿ ಹೊರಬಂದಿದ್ದು ಆತನ ಲ್ಯಾಪ್‌ಟಾಪ್ ವಶಪಡಿಸಿಕೊಂಡಿರುವ ಸಿಐಡಿ ಅಧಿಕಾರಿಗಳು, ಪರಿಶೀಲನೆಗೆ ಮುಂದಾಗಿದ್ದಾರೆ.
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ನಗರ ಪೊಲೀಸರು, ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮಾಡಿದ ಹ್ಯಾಕಿಂಗ್ ಬಗ್ಗೆ ೨೦೨೧ ರ ಎಪ್ರಿಲ್ ೨೮ ರಂದು ಇಂಟರ್‌ಪೋಲ್ ಸಂಪರ್ಕ ಅಧಿಕಾರಿಯ ಸಿಐಡಿಗೆ ಪತ್ರ ಬರೆಯಲಾಗಿತ್ತು.
ಇಂಟರ್‌ಪೋಲ್‌ನೊಂದಿಗಿನ ಹಂಚಿಕೊಂಡ ಪತ್ರದಲ್ಲಿ ಮುದ್ರಣ ದೋಷದಿಂದಾಗಿ ಅಪರಾಧಗಳ ಸಂಖ್ಯೆಯಲ್ಲಿ ತಪ್ಪಾಗಿದೆ ಎಂದು ಹೇಳಿದೆ.ಅಲ್ಲದೆ, ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ಕಾಟನ್‌ಪೇಟೆ, ಸೈಬರ್ ಕ್ರೈಂ, ಕೆಂಪೇಗೌಡನಗರ, ಅಶೋಕನಗರ ಠಾಣೆಗಳಲ್ಲಿ ಹ್ಯಾಕಿಂಗ್ ಕುರಿತು ದಾಖಲಾಗಿರುವ ನಾಲ್ಕು ಪ್ರಕರಣಗಳ ವಿವರಗಳನ್ನು ಉಲ್ಲೇಖಿಸಿರುವುದು ಕಂಡು ಬಂದಿದೆ.
ವಿವಿಧ ವೆಬ್‌ಸೈಟ್‌ಗಳು ಮತ್ತು ಬಿಟ್‌ಕಾಯಿನ್ ವಿನಿಮಯ ಕೇಂದ್ರಗಳಲ್ಲಿ ಹ್ಯಾಕಿಂಗ್ ಮತ್ತು ರಾನ್ಸಮ್‌ವೇರ್ ದಾಳಿ ಸೇರಿದಂತೆ ಇತರ ಅಪರಾಧಗಳನ್ನು ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆಂದು ಪತ್ರದಲ್ಲಿ ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ