
ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಚಂದ್ರನ ಮೇಲಿನ ಸಂಶೋಧನೆಗಾಗಿ 10 ತರಬೇತಿ ಗಗನಯಾತ್ರಿಗಳನ್ನು ಆಯ್ಕೆ ಮಾಡಿದ್ದು, ಈ ಯೋಜನೆಯಲ್ಲಿ ಭಾರತೀಯ ಮೂಲದ ಅನಿಲ್ ಮೆನನ್ ಆಯ್ಕೆಯಾಗಿದ್ದಾರೆ.
45 ವರ್ಷದ ಅನಿಲ್ ಮನನ್ ಅವರು ನಾಸಾದ ಸ್ಪೇಸ್ ಎಕ್ಸ್ ಕಾರ್ಯಾಚರಣೆಯಲ್ಲಿ ಫ್ಲೈಟ್ ಸರ್ಜನ್ ಆಗಿ ಕಾರ್ಯ ನಿರ್ವಹಿಸಿದ್ದರು. ಅನಿಲ್ ಅವರು ಅಮೆರಿಕದ ವಾಯುಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಾಸಾದ ಮೂನ್ ಮಿಷನ್‌ಗೆ 12 ಸಾವಿರ ಅರ್ಜಿಗಳು ಬಂದಿದ್ದು, ಆ ಪೈಕಿ 10 ಮಂದಿ ಮಾತ್ರ ತರಬೇತಿಗೆ ಆಯ್ಕೆಯಾಗಿದ್ದಾರೆ. ಈ ತಂಡ ಮತ್ತೆ ಎರಡು ವರ್ಷಗಳ ತರಬೇತಿ ಪಡೆದುಕೊಳ್ಳಬೇಕಾಗುತ್ತದೆ. ತರಬೇತಿ ಪೂರ್ಣಗೊಂಡ ನಂತರವೇ ನಾಸಾದ ಆರ್ಟೆಮಿಸ್ ಜನರೇಷನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಡಿ ನಾಸಾ 2025ರಲ್ಲಿ ಚಂದ್ರನ ಮೇಲ್ಮೈಗೆ ಮೊದಲ ಮಹಿಳೆ ಹಾಗೂ ಪುರುಷನನ್ನು ಕಳುಹಿಸುವ ಯೋಜನೆ ಹಾಕಿಕೊಂಡಿದೆ.
ಅನಿಲ್ ಮೆನನ್ ತಂದೆ ಭಾರತೀಯ ಹಾಗೂ ತಾಯಿ ಉಕ್ರೇನಿಯನ್ ಆಗಿದ್ದು, ಇವರು ಅಮೆರಿಕದ ಮಿನ್ನೇಸೋಟದಲ್ಲಿ ನೆಲೆಸಿದ್ದಾರೆ. ಅನಿಲ್ ಮೆನನ್ 1999ರಲ್ಲಿ ಹಾರ್ವರ್ಡ್ ವಿಶ್ವಿವಿದ್ಯಾಲಯದಿಂದ ನ್ಯೂರೋಬಯಾಲಜಿಯಲ್ಲಿ ಪದವಿ ಪಡೆದರು. ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ 2004 ರಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಹಾಗೂ ಸ್ಟ್ಯಾನ್‌ಫೋರ್ಡ್ ವೈದ್ಯಕೀಯ ಶಾಲೆಯಿಂದ ಡಾಕ್ಟರೇಟ್ ಪದವಿ ಪಡೆದ ಅನಿಲ್ ಮೆನನ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನಾಸಾದ ಹಲವು ಯೋಜನೆಗಳಿಗೆ ಸೇವೆ ಸಲ್ಲಿಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ