ಮುಂಬೈ: ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತ 16 ಜನರಲ್ಲಿ ಒಬ್ಬರಾದ ವಕೀಲೆ, ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ ಅವರು ಮೂರು ವರ್ಷಗಳ ಬಳಿಕ ಇಂದು, ಗುರುವಾರ ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಡಿಸೆಂಬರ್ 1 ರಂದು ಬಾಂಬೆ ಹೈಕೋರ್ಟ್ ನೀಡಿದ್ದ ಡೀಫಾಲ್ಟ್ ಜಾಮೀನಿಗೆ ತಡೆ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮನವಿಯನ್ನು ಸುಪ್ರೀಂಕೋರ್ಟ್ ಎರಡು ದಿನಗಳ ಹಿಂದೆ ತಿರಸ್ಕರಿಸಿತ್ತು. ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಮಗೆ ಯಾವುದೇ ಕಾರಣವಿಲ್ಲ ಎಂದು ಹೇಳಿ ಪೀಠವು ಅರ್ಜಿ ವಜಾಗೊಳಿಸಿತ್ತು.
ಈ ಪ್ರಕರಣವನ್ನು ಮೊದಲು ಪುಣೆ ಪೊಲೀಸರು ನಿರ್ವಹಿಸಿದ್ದರು ಮತ್ತು ನಂತರ ಎನ್ಐಎ ಕೈಗೆತ್ತಿಕೊಂಡಿತ್ತು. ಸುಧಾ ಭಾರದ್ವಾಜ್ ಅವರನ್ನು ಆಗಸ್ಟ್ 28, 2018 ರಂದು ಬಂಧಿಸಲಾಯಿತು ಮತ್ತು ನಂತರ ಗೃಹಬಂಧನದಲ್ಲಿ ಇರಿಸಲಾಯಿತು. ನಂತರ ಅಕ್ಟೋಬರ್ 27, 2018 ರಂದು ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಡಿ. 31, 2017 ರಂದು ಎಲ್ಗಾರ್ ಪರಿಷತ್ತಿನ ಸಮಾವೇಶದಲ್ಲಿ ಭಾಷಣ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ರಾಜ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಸುಧಾ ಅವರನ್ನು ಆರಂಭದಲ್ಲಿ ಪುಣೆಯ ಯೆರವಾಡ ಜೈಲಿನಲ್ಲಿ ಇರಿಸಲಾಗಿತ್ತು. ತನಿಖೆಯನ್ನು ಎನ್ಐಎಎ ವಹಿಸಿಕೊಂಡ ನಂತರ ಬೈಕುಲ್ಲಾ ಮಹಿಳಾ ಜೈಲಿಗೆ ಸ್ಥಳಾಂತರಿಸಲಾಯಿತು. ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದೆ.
ಜಾಮೀನು ಷರತ್ತುಗಳ ಭಾಗವಾಗಿ ವಿಶೇಷ ಎನ್ಐಎ ನ್ಯಾಯಾಲಯವು 60 ವರ್ಷದ ಕಾರ್ಯಕರ್ತೆ ಸುಧಾ ಅವರಿಗೆ ತಮ್ಮ ಪಾಸ್ಪೋರ್ಟ್ ಸಲ್ಲಿಸಬೇಕು ಮತ್ತು ಮುಂಬೈನಲ್ಲಿ ಉಳಿಯಬೇಕು ಎಂದು ಹೇಳಿದೆ. ನಗರ ಮಿತಿಯನ್ನು ತೊರೆಯಬೇಕಾರು ಸುಧಾ ಭಾರದ್ವಾಜ ಅವರು ನ್ಯಾಯಾಲಯದ ಅನುಮತಿ ಪಡೆಯಬೇಕು ಹಾಗೂ ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಸಂವಹನ ನಡೆಸುವಂತಿಲ್ಲ ಎಂದು ವಿಶೇಷ ನ್ಯಾಯಾಲಯ ಹೇಳಿದೆ.
50,000 ರೂ.ಗಳ ತಾತ್ಕಾಲಿಕ ನಗದು ಜಾಮೀನಿನ ಮೇಲೆ ಸುಧಾ ಭಾರದ್ವಾಜ ಅವರನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಹತ್ತಿರದ ಪೊಲೀಸ್ ಠಾಣೆಗೆ – ದೈಹಿಕವಾಗಿ ಅಥವಾ ವಿಡಿಯೊ ಕರೆ ಮೂಲಕ ಭೇಟಿ ನೀಡುವಂತೆ ನಿರ್ದೇಶಿಸಲಾಗಿದೆ.
ಅಲ್ಲದೆ, ಪ್ರಕರಣದಲ್ಲಿ ಸಹ-ಆರೋಪಿಗಳೊಂದಿಗೆ ಯಾವುದೇ ಸಂಪರ್ಕ ಸಾಧಿಸಬಾರದು ಮತ್ತು ಯಾವುದೇ ಅಂತರರಾಷ್ಟ್ರೀಯ ಕರೆಗಳನ್ನು ಮಾಡಬಾರದು ಎಂದು ಅವರಿಗೆ ನಿರ್ದೇಶಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ