ಪ್ರತಿಮೆಗಳನ್ನು ಗುರಿಯಾಗಿಸಿಕೊಂಡ ಕಿಡಿಗೇಡಿಗಳನ್ನು ಸುಮ್ಮನೆ ಬಿಡುವುದಿಲ್ಲ: ಸಿಎಂ ಬೊಮ್ಮಾಯಿ

ಬೆಂಗಳೂರು/ಶಿವಮೊಗ್ಗ: ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಮತ್ತು ಛತ್ರಪತಿ ಶಿವಾಜಿ ಅವರ ಪ್ರತಿಮೆಗೆ ದುಷ್ಕರ್ಮಿಗಳು ದಾಳಿ ನಡೆಸಿದ ನಂತರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಪ್ರತಿಮ ವ್ಯಕ್ತಿಗಳು. ಅವರನ್ನು ಗೌರವಿಸಬೇಕು ಮತ್ತು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
ಶಿವಾಜಿಯ ಪ್ರತಿಮೆಯನ್ನು ಅಪವಿತ್ರಗೊಳಿಸಲಾಗಿದೆ ಎಂಬ ಸುದ್ದಿಯ ನಂತರ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ಬ್ರಿಟಿಷರ ವಿರುದ್ಧ ಹೋರಾಡಿದ 19 ನೇ ಶತಮಾನದ ಐಕಾನ್ ರಾಯಣ್ಣನ ಪ್ರತಿಮೆಯನ್ನು ಧ್ವಂಸಗೊಳಿಸಿದ ನಂತರ ಶನಿವಾರ ಬೆಳಗಾವಿಯಲ್ಲಿ ಉದ್ವಿಗ್ನತೆ ಉಂಟಾಗಿದೆ.
“ದೇಶಭಕ್ತರನ್ನು ಗೌರವಿಸುವಂತೆ ನಾನು ಜನರಿಗೆ ಮನವಿ ಮಾಡುತ್ತೇನೆ. ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದರು. ಗೌರವ ಸೂಚಕವಾಗಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜರ ಪ್ರತಿಮೆಗಳನ್ನು ನಿರ್ಮಿಸಲಾಯಿತು. ನಾವು ಅವರನ್ನು ಗೌರವಿಸಬೇಕು ಮತ್ತು ಅವರ ಘನತೆಯನ್ನು ಉಳಿಸಿಕೊಳ್ಳಬೇಕು ಎಂದು ಬೊಮ್ಮಾಯಿ ಹೇಳಿದರು.
ಛತ್ರಪತಿ ಶಿವಾಜಿ, ಕಿತ್ತೂರು ರಾಣಿ ಚೆನ್ನಮ್ಮ ಅಥವಾ ವೀರ ಸಂಗೋಳಿ ರಾಯಣ್ಣ ಅವರೆಲ್ಲರೂ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ವಸಾಹತುಶಾಹಿ ಶಕ್ತಿಗಳ ವಿರುದ್ಧ ಹೋರಾಡಿದ್ದಾರೆ ಎಂದು ಅವರು ಈ ಹಿಂದೆ ಟ್ವೀಟ್ ಮಾಡಿದ್ದಾರೆ.
ಭಾಷಾ ರಾಜಕಾರಣದ ಹೆಸರಿನಲ್ಲಿ ನಮ್ಮ ಯಾವುದೇ ಮಹಾನ್ ರಾಷ್ಟ್ರೀಯ ನಾಯಕರನ್ನು ಅವಮಾನಿಸುವುದು ರಾಷ್ಟ್ರೀಯತೆಯ ಮನೋಭಾವಕ್ಕೆ ಮಾಡುವ ಅಪಚಾರವಾಗಿದೆ ಮತ್ತು ಅದನ್ನು ಸಹಿಸುವುದಿಲ್ಲ. ಯಾವುದೇ ಸಂದರ್ಭದಲ್ಲೂ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸುವ ದುಷ್ಕರ್ಮಿಗಳನ್ನು ನಾವು ಬಿಡುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು. ಐತಿಹಾಸಿಕ ವ್ಯಕ್ತಿಗಳ ಕೊಡುಗೆಯನ್ನು ಕೀಳಾಗಿಸುವುದಕ್ಕಾಗಿ ಇತರ ವಿಷಯಗಳನ್ನು ಬೆರೆಸಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ದೇಶಭಕ್ತರನ್ನು ಅವಮಾನಿಸುವುದನ್ನು ಮತ್ತು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವುದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ನಿಮ್ಮ ಭಾವನೆಗಳನ್ನು ಶಾಂತಿಯುತವಾಗಿ ತಿಳಿಸಿ. ಇಲ್ಲದಿದ್ದರೆ ಅವರು ಯಾರೇ ಆಗಿರಲಿ ಅವರನ್ನು ಕಬ್ಬಿಣದ ಕೈಯಿಂದ ಎದುರಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಇದೇ ವೇಳೆ ಶಿವಮೊಗ್ಗದಲ್ಲಿ ಮಾತನಾಡಿದ ರಾಜ್ಯ ಗೃಹ ಸಚಿವ ಆರಗ ಜ್ನಾನೇಂದ್ರ, ಬೆಳಗಾವಿಯಲ್ಲಿ ನಿನ್ನೆಯಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ನಿನ್ನೆಯಿಂದ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ ಎಂದು ರಾಜ್ಯದ ಗೃಹ ಸಚಿವ ಹೇಳಿದ್ದಾರೆ.
ಕನ್ನಡಿಗರು, ಮರಾಠಿಗರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಇದನ್ನು ಸಹಿಸದೆ ಕೆಲವರಿಂದ ಗಲಭೆಗೆ ಪ್ರಚೋದಿಸುವ ಕೆಲಸ ನಡೆಯುತ್ತಿದೆ. ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಕಾನೂನಿನಡಿ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.
ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಶಿವಾಜಿ ರಾಷ್ಟ್ರೀಯ ವ್ಯಕ್ತಿಗಳು. ಯಾವುದೇ ಜಾತಿಗೆ ಮತ್ತು ಭಾಷೆಗೆ ಸಂಬಂಧಪಟ್ಟವರಲ್ಲ. ಇವರ ವ್ಯಕ್ತಿತ್ವವನ್ನು ಎಲ್ಲ ಭಾಷಿಕರು ಗೌರವಿಸುತ್ತಾರೆ. ಇಂತಹವರ ಹೆಸರಿನಲ್ಲಿ ಏನೇನೋ ಮಾಡುತ್ತಿದ್ದಾರೆ. ಪ್ರತಿಮೆಗಳನ್ನು ಧ್ವಂಸಗೊಳಿಸುತ್ತಾರೆ, ಇದನ್ನು ಯಾವುದೇ ಕಾರಣಕ್ಕೂ ಸರ್ಕಾರ ಸಹಿಸುವುದಿಲ್ಲ. ಬೆಳಗಾವಿಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸ್ ಇಲಾಖೆ ಬಹಳ ದಿಟ್ಟ ನಿಲುವು ತೆಗೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ 9ವರೆಗೂ ಭಾರಿ ಮಳೆ ಮುನ್ಸೂಚನೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement