ಸಚಿವ ಸ್ಥಾನಕ್ಕೆ ಮಧು ಬಂಗಾರಪ್ಪ ಪಟ್ಟು : ಶಿವರಾಜಕುಮಾರ ಭೇಟಿಯಾದ ಸುರ್ಜೇವಾಲಾ…!

ಬೆಂಗಳೂರು : ಸಚಿವ ಸ್ಥಾನ ಕ್ಕಾಗಿ ಹಲವರು ಕಸರತ್ತು ನಡೆಸುತ್ತಿದ್ದಾರೆ. ಇದೇ ವೇಳೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಸ್ಯಾಂಡಲ್‌ವುಡ್‌ ನಟ ಶಿವರಾಜಕುಮಾರ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಶಿವರಾಜಕುಮಾರ ಅವರ ಪತ್ನಿಯ ತಮ್ಮನಾಗಿರುವ ಮಧು ಬಂಗಾರಪ್ಪ ಕೂಡ ಒಬ್ಬರಾಗಿದ್ದಾರೆ. ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಮಧು ಬಂಗಾರಪ್ಪ ಅವರ ಬೆಂಬಲಿಗರು ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರ ಪರವಾಗಿ ಪ್ರಚಾರ ಮಾಡಿದ್ದ ಶಿವರಾಜಕುಮಾರ ಅವರು ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಸಿಗುವ ಭರವಸೆ ವ್ಯಕ್ತಪಡಿಸಿದ್ದರು. ಈಗ ಅವರಿಗೆ ಸಿಕ್ಕಿಲ್ಲ, ಹೀಗಾಗಿ ಅವರಿಗೆ ಸಮಾಧಾನ ಮಾಡಲು ರಣದೀಪ್‌ ಸುರ್ಜೇವಾಲಾ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆಯೇ ಎಂಬ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ಚುನಾವಣೆ ವೇಳೆ ನಟಶಿವರಾಜಕುಮಾರ ಅವರ ಪತ್ನಿ ಗೀತಾ ಶಿವರಾಜಕುಮಾರ ಅವರು ಕಾಂಗ್ರೆಸ್‌ ಪಕ್ಷ ಸೇರಿದ್ದರು. ಇದಾದ ಬಳಿಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರ ಪರ ಶಿವರಾಜಕುಮಾರ ಅವರು ಪ್ರಚಾರ ನಡೆಸಿದ್ದರು.

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

ಸದ್ಯ ಈ ಸ್ಟಾರ್‌ ದಂಪತಿಯನ್ನು ಭೇಟಿಯಾಗಿರುವ ರಣದೀಪ್‌ ಸುರ್ಜೇವಾಲಾ, ಪಕ್ಷವನ್ನು ಬೆಂಬಲಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಹಾಗೂ ಈ ಬಗ್ಗೆ ಅವರು ಟ್ವೀಟ್‌ ಕೂಡ ಮಾಡಿದ್ದಾರೆ. ಮೇಲ್ನೋಟಕ್ಕೆ ಇದು ಸ್ನೇಹಪೂರ್ವಕ ಭೇಟಿ ಎನ್ನಿಸಿದರೂ ಮಧು ಬಂಗಾರಪ್ಪನವರ ಸಚಿವ ಸ್ಥಾನದ ಬಗ್ಗೆ ಚರ್ಚೆ ಕೂಡ ನಡೆದಿದೆ ಎನ್ನಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement