ಬೆಂಗಳೂರು: ಕ್ರಿಮಿನಲ್ ಕೇಸ್ ಮುಗಿಯುವವರೆಗೆ ಶಾಸಕ ಜನಾರ್ದನ ರೆಡ್ಡಿ, ಪತ್ನಿ ಲಕ್ಷ್ಮೀ ಅರುಣಾ ರೆಡ್ಡಿಗೆ ಸೇರಿದ 82 ಸ್ಥಿರಾಸ್ತಿ ಜಪ್ತಿಗೆ ಸಿಬಿಐ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮೀ ಅರುಣಾಗೆ ಸೇರಿದ ಸುಮಾರು 124 ಆಸ್ತಿಗಳನ್ನು ಸಿಬಿಐ ಪಟ್ಟಿ ಮಾಡಿ, ಅವುಗಳನ್ನು ಜಪ್ತಿ ಮಾಡಲು ಅವಕಾಶ ನೀಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, ಅವುಗಳಲ್ಲಿ ಸದ್ಯಕ್ಕೆ 74ಕ್ಕೂ ಹೆಚ್ಚು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು (ಕೆಆರ್ ಪಿಪಿ) ಸ್ಥಾಪಿಸಿದ ರೆಡ್ಡಿ, ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ತಮ್ಮ ಪಕ್ಷದ ಪರವಾಗಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ಕೆಆರ್ ಪಿಪಿ ಪಕ್ಷದಿಂದ ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರ ಪತ್ನಿ ಅರುಣಾ ಸೋಲು ಕಂಡಿದ್ದಾರೆ.
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆಯ ಅಡಿಯಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಸಿಬಿಐ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಅರುಣಾ ಅವರ ಹೆಸರಿನಲ್ಲಿ ಅನೇಕ ಆಸ್ತಿಗಳಿರುವುದನ್ನು ಪತ್ತೆ ಮಾಡಿತ್ತು. ಈ ಬಗ್ಗೆ ಜನವರಿಯಲ್ಲೇ ಆರೋಪ ಪಟ್ಟಿಯೊಂದನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆ ಆಸ್ತಿಗಳನ್ನು ಮುಟ್ಟುಗೋಲು ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ