ಡ್ರೋನ್​ ದಾಳಿ ಅಪಾಯ ತಪ್ಪಿಸಿಕೊಳ್ಳಲು ಆ್ಯಂಟಿ​ ಡ್ರೋನ್​ ತಂತ್ರಜ್ಞಾನ ಅಳವಡಿಕೆಗೆ ಮುಂದಾದ ತಿರುಪತಿ ದೇವಾಲಯ 

ಡ್ರೋನ್​ ದಾಳಿ ತಪ್ಪಿಸಲು ಒಂದು ಹೊಸ ತಂತ್ರಜ್ಞಾನ ಅಳವಡಿಸಲು ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಮುಂದಾಗಿದೆ. ಆ್ಯಂಟಿ-ಡ್ರೋನ್​​ ಟೆಕ್ನಾಲಜಿಯನ್ನು ಅದು ಯಶಸ್ವಿಯಾಗಿ ಅಳವಡಿಸಿದ್ದೇ ಆದರೆ, ಇಂಥದ್ದೊಂದು ತಂತ್ರಜ್ಞಾನ ಅಳವಡಿಸಿಕೊಂಡ ದೇಶದ ಮೊದಲ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ
. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಆ್ಯಂಟಿ-ಡ್ರೋನ್​ ಟೆಕ್ನಾಲಜಿಯನ್ನು ಅಳವಡಿಸಿಕೊಳ್ಳಲು ತಿರುಮಲ ದೇವಸ್ಥಾನ ದೇಗುಲ ನಿರ್ವಹಣೆ ಮಂಡಳಿಯಾದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮುಂದಾಗಿದೆ.
ಇತ್ತೀಚೆಗೆ ಜಮ್ಮುವಿನ ವಾಯುನೆಲೆ ಮೇಲೆ ಡ್ರೋನ್​ ದಾಳಿಯಾಗಿತ್ತು. ಅದಾದ ನಂತರದಲ್ಲಿ ಜು.6ರಂದು ಡಿಆರ್​ಡಿಒ ಕರ್ನಾಟಕದ ಕೋಲಾರದಲ್ಲಿ, ಆ್ಯಂಟಿ-ಡ್ರೋನ್​ ವ್ಯವಸ್ಥೆ ಅಳವಡಿಸಿಕೊಳ್ಳುವ ಬಗ್ಗೆ ಪ್ರದರ್ಶನ ನೀಡಿತ್ತು. ಇದರಲ್ಲಿ ಟಿಟಿಡಿ ಪಹರೆ ಮತ್ತು ಭದ್ರತಾ ವಿಭಾಗದ ಮುಖ್ಯಸ್ಥ ಗೋಪಿನಾಥ್ ಜಟ್ಟಿ ಪಾಲ್ಗೊಂಡಿದ್ದರು. ಡಿಆರ್​ಡಿಒ ಪರಿಚಯಿಸಿದ ಈ ಸಿಸ್ಟಂ ಸುಮಾರು ನಾಲ್ಕು ಕಿಮೀ ದೂರದ ವರೆಗೆ ಡ್ರೋನ್‌ ಪತ್ತೆ ಸಾಮರ್ಥ್ಯ ಹೊಂದಿದೆ. ಮತ್ತು ರೇಡಿಯೋ ಫ್ರಿಕ್ವೆನ್ಸಿ ಜ್ಯಾಮಿಂಗ್​​ ಮೂಲಕ ಸಾಫ್ಟ್ ಕಿಲ್ ಆಯ್ಕೆಯೊಂದಿಗೆ ಸಂವಹನವನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿದೆ..ಆದರೆ ಇದಕ್ಕೆ 25 ಕೋಟಿ ರೂ.ಗಳು ವೆಚ್ಚವಾಗುತ್ತದೆ.
ತಿರುಪತಿಯ ತಿರುಮಲ ದೇವಸ್ಥಾನವು ದೇಶದ ಅತ್ಯಂತ ಶ್ರೀಮಂತ ಹಿಂದು ದೇವಾಲಯಗಳಲ್ಲಿ ಒಂದಾಗಿದೆ. ವಾರ್ಷಿಕ ವರಮಾನ 3000 ಕೋಟಿ ರೂಪಾಯಿಯಷ್ಟಿದ್ದು, 14 ಸಾವಿರಕ್ಕೂ ಹೆಚ್ಚು ಜನರು ಇಲ್ಲಿ ಕೆಲಸ ಮಾಡುತ್ತಾರೆ. ಹಾಗಾಗಿ, ಭವಿಷ್ಯದಲ್ಲಿ ಆಗಬಹುದಾದ ಯಾವುದೇ ತೊಂದರೆಗಳನ್ನು ತಪ್ಪಿಸಲು ಇದನ್ನು ಅಳವಡಿಸಿಕೊಳ್ಳಲು ಟಿಟಿಡಿ ಮುಂದಾಗಿದೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement