ಬೆಂಗಳೂರಲ್ಲಿ ಭಾರತದ ಮೊದಲ ಭೂಗತ ಟ್ರಾನ್ಸ್‌ಫಾರ್ಮರ್ ಲೋಕಾರ್ಪಣೆ

ಬೆಂಗಳೂರು: ಬೆಸ್ಕಾಂ ಮತ್ತು ಬಿಬಿಎಂಪಿ ಸಹಭಾಗಿತ್ವದಲ್ಲಿದೇಶದಲ್ಲೇ ಮೊದಲ ಬಾರಿಗೆ, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲದಡಿಯಲ್ಲಿ 500 ಕೆವಿ ವಿದ್ಯುತ್‌ ಪರಿವರ್ತಕ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಇಂಧನ ಇಲಾಖೆ ಸಚಿವ ಕೆ.ಜೆ. ಜಾರ್ಜ್ ಅವರು, ಈ ಭೂಗತ ವಿದ್ಯುತ್ ಪರಿವರ್ತಕವನ್ನು ಲೋಕಾರ್ಪಣೆ ಮಾಡಿದರು. ಮಾಜಿ ಉಪಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ ಭಾಗಿಯಾಗಿದ್ದರು.
ಬೆಂಗಳೂರಿನ ಮಲ್ಲೇಶ್ವರದ 15ನೇ ಅಡ್ಡರಸ್ತೆ ಬಳಿ ನಿರ್ಮಿಸಿರುವ ನೆಲದಡಿಯಲ್ಲಿ ಪರಿವರ್ತಕದ ಟ್ರಾನ್ಸ್‌ಫಾರ್ಮರ್‌ ಉದ್ದ 14 ಮೀಟರ್‌, ಅಗಲ 5 ಮೀಟರ್‌ ಹಾಗೂ ಆಳ 4 ಮೀಟರ್‌ಗಳಷ್ಟಿದೆ. ಭೂಗತ ಟ್ರಾನ್ಸ್‌ಫಾರ್ಮರ್‌ನ ಸ್ಥಾಪನೆಯ ವೆಚ್ಚ ಒಟ್ಟು 1.97 ಕೋಟಿ ರೂ.ಗಳು ಎಂದು ಹೇಳಲಾಗಿದೆ. ಇದರಲ್ಲಿ ಎಲೆಕ್ಟ್ರಿಕಲ್‌ ಕಾಮಗಾರಿಗೆ 1.33 ಕೋಟಿ ರೂ. ವೆಚ್ಚವಾಗಿದೆ.

ಭೂಮಿಯ ಅಡಿಯಲ್ಲಿ 500 ಕೆವಿ ತೈಲರಹಿತ ಪರಿವರ್ತಕ, 8 ವೇ ಸಾಲಿಡ್ ಸ್ಟೇಟ್ ರಿಂಗ್ ಮೈನ್ ಯುನಿಟ್, 5 ವೇ ಎಲ್.ಟಿ. ವಿತರಣಾ ಪೆಟ್ಟಿಗೆ, 2 ಕೆವಿಎ ಯುಪಿಎಸ್, 1 ಹೆಚ್.ಪಿ ವಾಟರ್ ಪಂಪ್ (ಸ್ವಯಂಚಾಲಿತ), ಹವಾನಿಯಂತ್ರಣ ವ್ಯವಸ್ಥೆ (ಸ್ವಯಂಚಾಲಿತ), ವಿದ್ಯುತ್ ದೀಪಗಳು, ಅಗ್ನಿಶಾಮಕ ಉಪಕರಣಗಳು ಸೇರಿದಂತೆ ಭೂಗತ ಪರಿವರ್ತಕ ಕೇಂದ್ರಕ್ಕೆ ಅವಶ್ಯವಿರುವ ಎಲ್ಲಾ ವಿದ್ಯುತ್ ಉಪಕರಣಗಳನ್ನು ಅಳವಡಿಸಲಾಗಿದೆ. ಈ ಯೋಜನೆಯ ಸಿವಿಲ್‌ ಕಾಮಗಾರಿಗೆ ಬಿಬಿಎಂಪಿ ರೂ. 64 ಲಕ್ಷ ಅನುದಾನ ಬಿಡುಗಡೆ ಮಾಡಿದೆ.
ಈ ಕಾಮಗಾರಿ 2022ರ ಮೇ 20ರಂದು ಆರಂಭಗೊಂಡಿತ್ತು. ಸಂಪೂರ್ಣ ವ್ಯವಸ್ಥೆಯನ್ನು ಭೂಗತವಾಗಿ ಪರಿವರ್ತಿಸಲಾಗುತ್ತಿದ್ದು, ಇದರಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸುವುದರ ಜೊತೆಗೆ ವಿದ್ಯುತ್‌ ಪೂರೈಕೆ ನಷ್ಟವನ್ನು ತಗ್ಗಿಸಬಹುದು ಹಾಗೂ ಗುಣಮಟ್ಟದ ವಿದ್ಯುತ್ ಪೂರೈಸಲು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಪರೇಷನ್‌ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ 40 ಯೋಧರು, 100ಕ್ಕೂ ಹೆಚ್ಚು ಭಯೋತ್ಪಾದಕರು ಸಾವು ; ಡಿಜಿಎಂಒ ರಾಜೀವ ಘಾಯ್‌

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement