ಸಿಗಂದೂರು ಲಾಂಚ್‌ನಿಂದ ನದಿಗೆ ಹಾರಿದ ಮಹಿಳೆಯ ರಕ್ಷಣೆ

ಶಿವಮೊಗ್ಗ: ಸಿಗಂದೂರು ಲಾಂಚ್‌ನಿಂದ ಮಹಿಳೆಯೊಬ್ಬರು ಶರಾವತಿ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಲಾಂಚ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಮಹಿಳೆ ಬದುಕುಳಿದಿದ್ದಾರೆ. ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯನ್ನು ಹಾವೇರಿ ಜಿಲ್ಲೆ ಹಿರೇಕೆರೂರಿನ ರೇಣುಕಾ (46) ಎಂದು ಗುರುತಿಸಲಾಗಿದೆ. ಮಹಿಳೆ ಭಾನುವಾರ ಸಂಜೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆದು ಪಡೆದು ಮರಳುತ್ತಿದ್ದರು. ಹೊಳೆಬಾಗಿಲು ಕಡೆಯಿಂದ ಕಳಸವಳ್ಳಿ ಕಡೆಗೆ ಲಾಂಚ್ ಹತ್ತಿದ್ದರು.ಹೊಳೆಯ ಮಧ್ಯೆ ಭಾಗಕ್ಕೆ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಲಾಂಚ್‌ನಿಂದ ಜಿಗಿದಿದ್ದಾರೆ. ಮಹಿಳೆ ನದಿಗೆ ಹಾರಿದ್ದನ್ನು ನೋಡಿ ಲಾಂಚ್‌ ಪ್ರಯಾಣಿಕರು ಭಯದಿಂದ ಕಿರುಚಿದ್ದಾರೆ.
ಮಳೆಯಿಂದಾಗಿ ಶರಾವತಿ ನದಿಯಲ್ಲಿ ನೀರಿನ ಮಟ್ಟ ಸ್ವಲ್ಪ ಏರಿಕೆಯಾಗಿದೆ. ಲಾಂಚ್‌ನಿಂದ ಮಹಿಳೆಯ ಜಿಗಿಯುತ್ತಿದ್ದಂತೆ ಸ್ಥಳೀಯರಾದ ಪ್ರಕಾಶ್ ಬೆಳಮಕ್ಕಿ ರಕ್ಷಣೆಗೆ ಮುಂದಾಗಿದ್ದಾರೆ. ಇವರಿಗೆ ಲಾಂಚ್ ಸಿಬ್ಬಂದಿ ನೆರವಾಗಿದ್ದಾರೆ.
ಮಹಿಳೆಯ ರಕ್ಷಣೆಗೆ ಮತ್ತು ಪ್ರಕಾಶ್ ಅವರಿಗೆ ಸೇಫ್ಟಿ ಟ್ಯೂಬ್‌ಗಳನ್ನು ನೀರಿಗೆ ಎಸೆಯಲಾಯಿತು. ಅಲ್ಲದೆ ಲಾಂಚ್‌ ಅನ್ನು ಮಹಿಳೆ ಬಳಿಗೆ ಕೊಂಡೊಯ್ಯಲಾಯಿತು. ಟ್ಯೂಬ್ ಸಹಾಯ ಮತ್ತು ಪ್ರಕಾಶ್ ನೆರವಿನಿಂದ ರೇಣುಕಾ ಅವರನ್ನು ರಕ್ಷಣೆ ಮಾಡಲಾಗಿದೆ.
ನಂತರ ಪ್ರಾಥಮಿಕ ಆರೈಕೆ ಮಾಡಲಾಯಿತು. ಲೈಫ್ ಜಾಕೆಟ್ ಹಾಕಲಾಯಿತು. ಲಾಂಚ್ ದಡಕ್ಕೆ ಬಂದ ನಂತರ ಅವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ರೇಣುಕಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement