ನವದೆಹಲಿ: ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ಕೇಂದ್ರ ಸರ್ಕಾರದಿಂದ ಭರವಸೆಗಳು ದೊರೆತ ಹಿನ್ನೆಲೆಯಲ್ಲಿ 26 ದಿನಗಳ ಕಾಲ ನಡೆಸಿದ್ದ ಉಪವಾಸ ಸತ್ಯಾಗ್ರಹವನ್ನು ಗುರುವಾರ ರಾತ್ರಿ ಅಂತ್ಯಗೊಳಿಸಿದ್ದಾರೆ. ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ಅವರು ಗುರುವಾರ ಮಧ್ಯರಾತ್ರಿ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ. ಇದರಿಂದಾಗಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ಕುರಿತಾದ ಅತ್ಯಂತ ಪ್ರಮುಖ ಪ್ರತಿಭಟನೆಗಳಲ್ಲಿ ಒಂದಕ್ಕೆ ವಿರಾಮ ಬಿದ್ದಿದೆ. ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗೆ ತಡರಾತ್ರಿ ನಡೆದ ಸಭೆ ಮತ್ತು ಪ್ರಧಾನಿ ನರೇಂದ್ರ ಮೋದಿ ಸಂದೇಶದ ನಂತರ ಅವರು ಈ ಬೆಳವಣಿಗೆ ನಡೆದಿದೆ. ಈ ಬಗ್ಗೆ ನೂತನ ಮಸೂದೆ ಮತ್ತು ತ್ವರಿತ ಗತಿ ನ್ಯಾಯಾಲಯಗಳು ಸೇರಿದಂತೆ ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ.
ಈ ಮಹತ್ವದ ಬೆಳವಣಿಗೆಗೆ ಮುನ್ನ ದಿನಪೂರ್ತಿ ಸರ್ಕಾರದ ಮಟ್ಟದಲ್ಲಿ ತೀವ್ರ ಮಾತುಕತೆಗಳು ನಡೆದಿದ್ದವು. ವಿದ್ಯಾರ್ಥಿಗಳ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ಹಾಗೂ ಸೋನಂ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಆತಂಕಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರೊಂದಿಗೆ ಸುಮಾರು ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಈ ಚರ್ಚೆಗಳ ವೇಳೆ ಸೋನಂ ವಾಂಗ್ಚುಕ್ ಮುಂದಿಟ್ಟಿದ್ದ ಬೇಡಿಕೆಗಳ ಬಗ್ಗೆ ಸರ್ಕಾರ ಸಕಾರಾತ್ಮಕ ನಿಲುವು ತಾಳಲು ನಿರ್ಧರಿಸಿದ್ದು, ಅವರ ಆರೋಗ್ಯ ಮತ್ತು ಕ್ಷೇಮವನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಂತರ ಡಾ. ಜಿತೇಂದ್ರ ಸಿಂಗ್ ಅವರು ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ, ವಾಂಗ್ಚುಕ್ ಅವರು ಮುಂದಿಟ್ಟಿದ್ದ ಬೇಡಿಕೆಗಳ ಬಗ್ಗೆ ಪರಿಶೀಲಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಬಳಿಕ ಸಂಜೆ ವೇಳೆ ಜೆ.ಪಿ. ನಡ್ಡಾ ಮತ್ತು ಡಾ. ಜಿತೇಂದ್ರ ಸಿಂಗ್ ಅವರು ಮೇದಾಂತ ಆಸ್ಪತ್ರೆಗೆ ಭೇಟಿ ನೀಡಿ ಸೋನಂ ವಾಂಗ್ಚುಕ್ ಅವರನ್ನು ಭೇಟಿಯಾಗಿ, ಸರ್ಕಾರದ ಭರವಸೆ ಪತ್ರವನ್ನು ವೈಯಕ್ತಿಕವಾಗಿ ಹಸ್ತಾಂತರಿಸಿದರು. ಮೂಲಗಳ ಪ್ರಕಾರ, ಸಂವಾದ ಪ್ರಕ್ರಿಯೆಯ ಭಾಗವಾಗಿ ಶುಕ್ರವಾರ ಸಿಜೆಪಿ (CJP) ನಿಯೋಗವನ್ನು ತಟಸ್ಥ ಸ್ಥಳದಲ್ಲಿ ಮಾತುಕತೆಗೆ ಆಹ್ವಾನಿಸಲಾಗುವುದು ಎಂಬ ಸಂದೇಶವನ್ನೂ ಕೇಂದ್ರ ಸಚಿವರು ನೀಡಿದರು. ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ನೇರ ಸಂವಾದವೂ ಸೋನಂ ವಾಂಗ್ಚುಕ್ ಅವರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.
ಮೂಲಗಳ ಪ್ರಕಾರ, ಮಾತುಕತೆಯ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ವ್ಯಾಪ್ತಿಯಲ್ಲಿ ಹೊಸ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ವಾಂಗ್ಚುಕ್ ಅವರಿಗೆ ಭರವಸೆ ನೀಡಲಾಗಿದೆ. ಈ ಪ್ರಸ್ತಾವನೆಗೆ ಇಂದು, ಶುಕ್ರವಾರ ಸಚಿವ ಸಂಪುಟದ ಅನುಮೋದನೆ ದೊರೆಯುವ ನಿರೀಕ್ಷೆಯಿದೆ.
ಇದರ ಜೊತೆಗೆ ಪ್ರತಿಭಟನೆಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಸೇರಿದಂತೆ ಇತರೆ ಬೇಡಿಕೆಗಳ ಮೇಲೂ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಲಾಗಿದೆ. ಆಸ್ಪತ್ರೆಯಲ್ಲಿ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಹಾಗೂ ಇತರರ ಸಮ್ಮುಖದಲ್ಲಿ ಸರ್ಕಾರದ ಭರವಸೆಗಳನ್ನು ಓದಿದ ಜೆ.ಪಿ. ನಡ್ಡಾ, “ದೆಹಲಿ ಜಂತರ್ ಮಂತರ್ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರು ಹಾಗೂ 2026ರ ಜುಲೈ 20ರಂದು ಸಂಸತ್ ಮೆರವಣಿಗೆಯಲ್ಲಿ ಭಾಗವಹಿಸಿದವರ ವಿರುದ್ಧ ಪ್ರಕರಣ ದಾಖಲಿಸದಿರುವ ಬಗ್ಗೆ ಸರ್ಕಾರ ಸಕಾರಾತ್ಮಕ ನಿಲುವು ಹೊಂದಿದೆ” ಎಂದು ಹೇಳಿದರು.
ಇದಲ್ಲದೆ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವುದಾಗಿ ಸರ್ಕಾರ ಈಗಾಗಲೇ ಭರವಸೆ ನೀಡಿದೆ ಎಂದು ಅವರು ಹೇಳಿದರು. “ಇತ್ತೀಚಿನ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ವಿಚಾರವನ್ನೂ ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸುತ್ತಿದೆ” ಎಂದು ನಡ್ಡಾ ತಿಳಿಸಿದರು. ಇದು ಕೂಡ ಸೋನಂ ವಾಂಗ್ಚುಕ್ ಅವರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.
ಸೋನಂ ವಾಂಗ್ಚುಕ್ ಅವರು ಉಪವಾಸ ಅಂತ್ಯಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿ, “ವೈದ್ಯರು ನೀಡಿರುವ ಸಲಹೆಯಂತೆ ಸೋನಂ ಜೀ ತಮ್ಮ ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಿ, ಶೀಘ್ರದಲ್ಲೇ ತಮ್ಮ ತೂಕವನ್ನು ಮರಳಿ ಪಡೆಯಲಿ ಎಂದು ನಾನು ಮನವಿ ಮಾಡುತ್ತೇನೆ” ಎಂದು ಬರೆದಿದ್ದಾರೆ. “ಸೋನಂ ಜೀ ಉತ್ತಮ ಆರೋಗ್ಯದಿಂದ ಇರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಉಪವಾಸ ಅಂತ್ಯಗೊಳಿಸಿದ ಬಳಿಕ ಮಾತನಾಡಿದ ಸೋನಂ ವಾಂಗ್ಚುಕ್ ಅವರು ಲಡಾಖ್ಗೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಮೂಲಗಳ ಪ್ರಕಾರ, ಲಡಾಖ್ಗೆ ಹಿಂದಿರುಗುವ ಮೊದಲು ಈ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ವಿದ್ಯಾರ್ಥಿಗಳು ಮತ್ತು ಬೆಂಬಲಿಗರೊಂದಿಗೆ ಸಂವಾದ ನಡೆಸುವುದಾಗಿ ಅವರು ಕೇಂದ್ರ ಸಚಿವರಿಗೆ ಭರವಸೆ ನೀಡಿದರು.
ಸರ್ಕಾರದ ಭರವಸೆಗಳ ಮೇಲೆ ವಿಶ್ವಾಸ ಇಡಬೇಕು ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡುವುದಾಗಿ ಹಾಗೂ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವವರು ಚಳವಳಿಯನ್ನು ದುರ್ಬಲಗೊಳಿಸಬಹುದಾದ “ಸಮಾಜವಿರೋಧಿ ಶಕ್ತಿಗಳ” ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳುವುದಾಗಿ ವಾಂಗ್ಚುಕ್ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇದೇ ವೇಳೆ ಸಂವಾದ ಪ್ರಕ್ರಿಯೆ ಮುಂದುವರಿಯುವ ಸಂದರ್ಭದಲ್ಲಿ ಪ್ರತಿಭಟನಾಕಾರರು ತಾಳ್ಮೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡುವುದರ ಜೊತೆಗೆ, ಶಾಂತಿಯುತ ಹಾಗೂ ರಚನಾತ್ಮಕ ಸಂವಾದಕ್ಕೆ ತಾನು ಮುಂದೆಯೂ ಬದ್ಧನಾಗಿರುವುದಾಗಿ ವಾಂಗ್ಚುಕ್ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ