ಬೆಂಗಳೂರು : ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (ಎಡಿಜಿಪಿ) ಹುದ್ದೆಗೆ ಬಡ್ತಿ ನೀಡುವ ಸಂಬಂಧ ಹೊಸದಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಹಿರಿಯ ಪೊಲೀಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರಿಗೆ ಕರ್ನಾಟಕ ಹೈಕೋರ್ಟ್ ಸೂಚಿಸಿದ್ದು, ಎರಡು ತಿಂಗಳಲ್ಲಿ ಮೌದ್ಗಿಲ್ ಮನವಿಯನ್ನು ಕಾನೂನಿನ ಅನ್ವಯ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಶುಕ್ರವಾರ ನಿರ್ದೇಶಿಸಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೂಡಿರುವ ಕ್ರಿಮಿನಲ್ ಮಾನಹಾನಿ ಪ್ರಕರಣವು ಖಾಸಗಿ ದಾವೆಯಾಗಿದ್ದು, ಅದನ್ನು ಗಣನೆಗೆ ತೆಗೆದುಕೊಳ್ಳದೇ ನ್ಯಾಯಯುತವಾಗಿ ತನಗೆ ದೊರೆಯಬೇಕಾದ ಬಡ್ತಿ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ರೂಪಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ಪೀಠವು “ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಲ್ಲಿಸಿರುವ ಮಧ್ಯಪ್ರವೇಶ ಕೋರಿಕೆ ಅರ್ಜಿಯು ಸೂಕ್ತವಾಗಿಲ್ಲ. ಅವರು ಅಗತ್ಯ ಪಕ್ಷಕಾರರಾಗಿಲ್ಲ. ಅಲ್ಲದೆ, ರೂಪಾ ಅವರು ಹೊಸದಾಗಿ ಡಿಒಪಿಟಿಗೆ ಮನವಿ ಸಲ್ಲಿಸಬೇಕು. ಮನವಿಯ ಸಂಬಂಧ ಸಕ್ಷಮ ಪ್ರಾಧಿಕಾರವು ಎಂಟು ವಾರಗಳಲ್ಲಿ ನಿರ್ಧಾರ ಕೈಗೊಳ್ಳಬೇಕು” ಎಂದು ನ್ಯಾಯಾಲಯ ಅರ್ಜಿ ಇತ್ಯರ್ಥಪಡಿಸಿತು.
ಇದಕ್ಕೂ ಮುನ್ನ, ರೋಹಿಣಿ ಸಿಂಧೂರಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ರೂಪಾ ವಿರುದ್ಧ ಹೂಡಿರುವ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ರೋಹಿಣಿ ಅವರು ದೂರುದಾರೆಯಾಗಿದ್ದಾರೆ. ಹೀಗಾಗಿ, ಪ್ರಕರಣದಲ್ಲಿ ಮಧ್ಯಪ್ರವೇಶಿಕೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಬಡ್ತಿ ವಿಚಾರವು ಡಿಒಪಿಟಿ ನಿಯಮದ ಪ್ರಕಾರ ಇದು ಮುಚ್ಚಿದ ಲಕೋಟೆಯ ಪ್ರಕ್ರಿಯೆಯಾಗಿದೆ” ಎಂದು ವಾದಿಸಿದರು.
ರೂಪಾ ಪ್ರತಿನಿಧಿಸಿದ್ದ ವಕೀಲ ಬಿಪಿನ್ ಹೆಗ್ಡೆ ಅವರು “ರೋಹಿಣಿ ದೂರು ದಾಖಲಿಸಿದ್ದು, ತನಿಖೆ ನಡೆದು ಅದನ್ನು ಕೈಬಿಡಲಾಗಿದೆ. ತನಿಖೆ ಕೈಬಿಟ್ಟ ಮೇಲೂ ಬಡ್ತಿ ನೀಡುತ್ತಿಲ್ಲ. ಅಡ್ವೊಕೇಟ್ ಜನರಲ್ ಮತ್ತು ಕಾನೂನು ಇಲಾಖೆಯು ತಮ್ಮ ಮತ್ತು ರೋಹಿಣಿ ನಡುವಿನ ದಾವೆಗಳು ಖಾಸಗಿ ಪ್ರಕರಣ ಎಂದು ಹೇಳಿದೆ. ಇದು ಸೇವಾ ಷರತ್ತು ಮತ್ತು ನಿಯಮಗಳಿಗೆ ಅನ್ವಯಿಸುವುದಿಲ್ಲ” ಎಂದು ವಾದಿಸಿದರು.
ಆಗ ಪೀಠವು “ರೋಹಿಣಿ ಅವರು ಇದರಲ್ಲಿ ಅಗತ್ಯ ಪಕ್ಷಕಾರರಲ್ಲ. ಇದು ಡಿಒಪಿಟಿ ಮತ್ತು ರೂಪಾ ಅವರಿಗೆ ಸಂಬಂಧಿಸಿದ ವಿಚಾರ. ಇದರಲ್ಲಿ ರೋಹಿಣಿ ಆತಂಕಗೊಳ್ಳುವುದು ಏನಿದೆ ಎಂದು ಪ್ರಶ್ನಿಸಿತು. ನೀವು ಕೇಡರ್ ಅಲ್ಲವೇ ಅಲ್ಲ. ಬೇರೆ ಕಾರಣಕ್ಕೆ ಅರ್ಜಿ ಸಲ್ಲಿಸಬಾರದು” ಎಂದು ಮೌಖಿಕವಗಿ ಹೇಳಿ ಅರ್ಜಿ ಇತ್ಯರ್ಥಪಡಿಸಿತು.
ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರು ಐ ಮಾನಿಟರಿ ಅಡ್ವೈಸರಿ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅವರ ವಿರುದ್ಧ ಸಿಬಿಐ ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಅದನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಅದಾಗ್ಯೂ, ಹೇಮಂತ ನಿಂಬಾಳ್ಕರ್ ಅವರಿಗೆ ಎಡಿಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಹೀಗಾಗಿ, ರೋಹಿಣಿ ಸಿಂಧೂರಿ ಮಾಡಿರುವ ಆರೋಪಗಳನ್ನು ಆಧರಿಸಿ ತಮ್ಮ ಬಡ್ತಿಯನ್ನು ತಡೆಹಿಡಿಯಬಾರದು ಎಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ರೂಪಾ ವಿವರಿಸಿದ್ದಾರೆ.
ರೂಪಾ ಅವರು ರೋಹಿಣಿ ವಿರುದ್ದ ಫೇಸ್‌ಬುಕ್ ಪೋಸ್ಟ್ ಹಾಕಿದ್ದಕ್ಕೆ ಆಕ್ಷೇಪಿಸಿ ರೋಹಿಣಿ ರೂಪಾ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ಹೂಡಿದ್ದರು. ಇದಕ್ಕೆ ವಿರುದ್ಧವಾಗಿ ರೂಪಾ ಮಾನಹಾನಿ ದಾವೆ ಹೂಡಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಉಭಯ ಅಧಿಕಾರಿಗಳು ಸಂಧಾನಕ್ಕೆ ಒಪ್ಪದ್ದರಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ