ಬೆಂಗಳೂರು : ಪ್ರತಿಷ್ಠಿತ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಕ್ಲಾಸ್ ರೂಮಿನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿ, ಬಳಿಕ ಏಟು ತಿಂದ ಘಟನೆ ನೆಲಮಂಗಲ ತಾಲೂಕಿನ ಮೆಡಿಕಲ್ ಕಾಲೇಜಿನಲ್ಲಿ (Medical College) ನಡೆದಿದೆ ಎಂದು ವರದಿಯಾಗಿದೆ.
ಅಬ್ದುಲ್ ಎಂಬ ಸಹಾಯಕ ಪ್ರಾಧ್ಯಾಪಕರು ಪಾಠ ಮಾಡುವ ವೇಳೆ ವಿದ್ಯಾರ್ಥಿನಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದಾರೆ. ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ (Girl Student) ಚಾಕೊಲೇಟ್ ಕೊಟ್ಟು ಪ್ರೊಫೆಸರ್ ಅಬ್ದುಲ್ ಪ್ರಪೋಸ್ ಮಾಡಿದ್ದು, ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ತರಗತಿಯಲ್ಲೇ ಪ್ರಶ್ನೆ ಮಾಡಿದ್ದಾರೆ. ಬಳಿಕ ಪ್ರೊಫೆಸರ್‌ಗೆ ಚಪ್ಪಲಿಯಿಂದ ಥಳಿಸಿದ್ದಾರೆ ಎಂದು ಹೇಳಲಾಗಿದೆ.
“ಈ ಬ್ಯಾಚ್ ನನಗೆ ನೀಡಿದ ಅಪಾರ ಪ್ರೀತಿಯನ್ನು ತಡೆದುಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಿಮ್ಮ ಬ್ಯಾಚ್‌ನ ಅತ್ಯಂತ ಪ್ರಮುಖ ಹುಡುಗಿಯೊಬ್ಬಳಿಗೆ ನಾನು ಪ್ರೇಮ ನಿವೇದನೆ ಮಾಡಲು ಬಯಸುತ್ತೇನೆ… ಮತ್ತು ಇಡೀ ಬ್ಯಾಚ್‌ಗೆ ಚಾಕೊಲೇಟ್ ವಿತರಿಸುತ್ತೇನೆ ಎಂದು ಹೇಳಿ ನಂತರ ಅವರು ಆ ವಿದ್ಯಾರ್ಥಿನಿಗೆ “ಐ ಲವ್ ಯೂ” ಎಂದು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.
ಲೆಕ್ಚರರ್ ಪ್ರಪೋಸ್ ಮಾಡಿದ ವೇಳೆ ವಿದ್ಯಾರ್ಥಿನಿ ಅಲ್ಲೇ ವಿರೋಧ ಮಾಡಿದ್ದಾಳೆ. ಪ್ರಾಧ್ಯಾಪಕರು ಪೋಡಿಯಂನಿಂದ ಕೆಳಗಿಳಿಯುತ್ತಿದ್ದಂತೆ,ಆ ವಿದ್ಯಾರ್ಥಿನಿ ನೀವು ಏನಾದ್ರು ಮಾತಾಡಬೇಕು ಅಂತಾ ಇದ್ರೆ ಪ್ರಿನ್ಸಿಪಾಲ್ ಬಳಿ ಹೋಗಿ ಎಂದು ಹೇಳಿದ್ದಾಳೆ.
ಈ ಹಿಂದೆ ನೀನು ನನಗೆ ಪ್ರಪೋಸ್ ಮಾಡಿಲ್ವಾ ಎಂದು ಪ್ರಾಧ್ಯಾಪಕ ವಿದ್ಯಾರ್ಥಿನಿಗೆ ಕೇಳಿದ್ದು, ಆಗ ವಿದ್ಯಾರ್ಥಿನಿ ನಾನು ಯಾವಾಗ ಪ್ರಪೋಸ್ ಮಾಡಿದೆ?” ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ್ದಾಳೆ. ಸಾಕ್ಷಿಗೆ ಸಿಸಿಟಿವಿ ದೃಶ್ಯವಿದೆ ಎಂದು ಪ್ರಾಧ್ಯಾಪಕರು ಹೇಳಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿನಿ ಸಿಸಿಟಿವಿ ವಿಡಿಯೋ ತೋರಿಸಿ ಎಂದಿದ್ದಾಳೆ. ಈ ಬಗ್ಗೆ ನಾಳೆ ಮಾತಾಡುವೆ ಎಂದು ಲೆಕ್ಚರರ್ ಕ್ಲಾಸ್ನಿಂದ ಹೊರಗೆ ಹೋಗಿದ್ದಾರೆ.
ವಿದ್ಯಾರ್ಥಿಗಳಿಂದ ಪ್ರಾಧ್ಯಾಪಕನ ಮೇಲೆ ಹಲ್ಲೆ
ಈ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಇತರೆ ವಿದ್ಯಾರ್ಥಿಗಳು ಪ್ರಾಧ್ಯಾಪಕರನ್ನು ತಡೆದು ತೀವ್ರ ವಾಗ್ವಾದ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ ವಿದ್ಯಾರ್ಥಿಗಳು ಪ್ರಾಧ್ಯಾಪಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಕಾರಿನ ಬಳಿಯೂ ಮತ್ತೊಮ್ಮೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಹಲ್ಲೆಯಿಂದ ಗಾಯಗೊಂಡ ಪ್ರಾಧ್ಯಾಪಕ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಲೇಜು ಆಡಳಿತ ಮಂಡಳಿಯು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ಅಮಾನತುಗೊಳಿಸಲಾಗಿದೆ. ಪ್ರಾಧ್ಯಾಪಕನ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಈ ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ