ಸಚಿವ ನಾಗೇಂದ್ರಗೆ ರಿಲೀಫ್ ನೀಡಿದ ಹೈಕೋರ್ಟ್ ಆದೇಶ

ಬೆಂಗಳೂರು : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಆರೋಪಿಯಾಗಿರುವ ಸಚಿವ ಬಿ ನಾಗೇಂದ್ರ ಅವರು ಪೂರ್ವಾನುಮತಿ ಇಲ್ಲದೇ ರಾಜ್ಯ ಬಿಟ್ಟು ತೆರಳುವಂತಿಲ್ಲ ಎಂದು ಜನಪ್ರತಿನಿಧಿಗಳ ಸತ್ರ ನ್ಯಾಯಾಲಯ ವಿಧಿಸಿದ್ದ ಷರತ್ತನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ರದ್ದುಪಡಿಸಿದೆ.
ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ ನಾಗೇಂದ್ರ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ವಿಚಾರಣೆ ವೇಳೆ ನಾಗೇಂದ್ರ ಪರ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಅರ್ಜಿದಾರರು ಸದ್ಯ ರಾಜ್ಯ ಸರ್ಕಾರದ ಸಚಿವ ಸಂಪುಟ ದರ್ಜೆ ಸಚಿವರಾಗಿದ್ದಾರೆ. ತಮ್ಮ ಅಧಿಕೃತ ಕೆಲಸಗಳ ನಿಮಿತ್ತ ರಾಜ್ಯದ ಗಡಿ ಮೀರಿ ಹೊರ ರಾಜ್ಯಗಳಿಗೆ ತೆರಳಬೇಕಾಗುತ್ತದೆ. ಪ್ರತಿ ಬಾರಿಯೂ ಅವರು ವಿಚಾರಣಾ ನ್ಯಾಯಾಲಯದ ಮುಂದೆ ಹೋಗಿ ಅನುಮತಿ ಕೋರಲಾಗದು. ಅದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ, ಈ ಕುರಿತ ಷರತ್ತನ್ನು ರದ್ದುಪಡಿಸಬೇಕು” ಎಂದು ಕೋರಿದರು.

ಇದನ್ನು ಆಕ್ಷೇಪಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ ಕಾಮತ್‌ “ಅರ್ಜಿದಾರರಿಗೆ 2024ರ ಅಕ್ಟೋಬರ್‌ನಲ್ಲೇ ಜಾಮೀನು ಮಂಜೂರಾಗಿದೆ. ಆನಂತರ ಅವರು ರಾಜ್ಯಬಿಟ್ಟು ತೆರಳಬೇಕಾದ ಪರಿಸ್ಥಿತಿ ಒದಗಿದಾಗಲೆಲ್ಲಾ ವಿಚಾರಣಾ ನ್ಯಾಯಾಲಯದ ಅನುಮತಿ ಪಡೆದೇ ಹೊರ ರಾಜ್ಯಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆ ವಿಧಾನವನ್ನು ಈಗಲೂ ಅನುಸರಿಸಬಹುದು ಎಂದು ವಾದಿಸಿದರು.
ವಾದ–ಪ್ರತಿವಾದ ಆಲಿಸಿದ ಪೀಠವು “ಅರ್ಜಿದಾರರು ಸದ್ಯ ರಾಜ್ಯ ಸರ್ಕಾರದ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ರಾಜ್ಯದ ಗಡಿ ಬಿಟ್ಟು ತೆರಳಬೇಕಾಗುತ್ತದೆ. ಅವರಿಗೆ ದೇಶದಾದ್ಯಂತ ಮುಕ್ತವಾಗಿ ಪ್ರಯಾಣಿಸಲು ಅನುಮತಿ ನೀಡದೇ ಹೋದರೆ, ಅವರ ಸ್ವಾತಂತ್ರ್ಯ ಹಾಗೂ ಸದ್ಯ ಹೊಂದಿರುವ ಸ್ಥಾನಮಾನವನ್ನು ಮೊಟಕಗೊಳಿಸಿದಂತಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣಾ ನ್ಯಾಯಾಲಯದ ಜಾಮೀನು ಆದೇಶದಲ್ಲಿನ ಮೂರನೇ ಷರತ್ತನ್ನು ರದ್ದುಪಡಿಸಿತು.
ಇದೇ ವೇಳೆ ಪೀಠವು ವಿಚಾರಣಾ ನ್ಯಾಯಾಲಯ ಅಥವಾ ಹೈಕೋರ್ಟ್‌ ಅನುಮತಿಯಿಲ್ಲದೆ ಯಾವುದೇ ಸಂದರ್ಭದಲ್ಲೂ ಅವರು ದೇಶಬಿಟ್ಟು ತೆರಳುವಂತಿಲ್ಲ” ಎಂದು ಸ್ಪಷ್ಟಪಡಿಸಿತು.
ವಿಶೇಷ ಸತ್ರ ನ್ಯಾಯಾಲಯವು 2024ರ ಅಕ್ಟೋಬರ್ 14ರಂದು ಜಾಮೀನು ಮಂಜೂರು ಮಾಡಿದಾಗ, ಪೂರ್ವಾನುಮತಿ ಇಲ್ಲದೆ ರಾಜ್ಯಬಿಟ್ಟು ತೆರಳುವಂತಿಲ್ಲ ಎಂದು ನಾಗೇಂದ್ರ ಅವರಿಗೆ ಷರತ್ತು ವಿಧಿಸಿತ್ತು.

ಪ್ರಮುಖ ಸುದ್ದಿ :-   ಭೂಸ್ವಾಧೀನಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ ; ₹12.95 ಕೋಟಿ ಅಕ್ರಮ ಆಸ್ತಿ, 100 ಎಕರೆ ಕೃಷಿ ಭೂಮಿ ಪತ್ತೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement