ದಾವಣಗೆರೆ: ದೇಶದಲ್ಲಿ ವಿರಳವಾದ ಕಾಯಿಲೆಯೊಂದು ದಾವಣಗೆರೆ ಎಸ್ಎಸ್ ಆಸ್ಪತ್ರೆಯಲ್ಲಿ 13 ವರ್ಷದ ಬಾಲಕನಲ್ಲಿ ಪತ್ತೆಯಾಗಿದೆ. ಅಪರೂಪದ ಅಕ್ಯುಟ್ ನೆಕ್ರೋಟೈಜಿಂಗ್ ಎನ್ಸೆಫಲೋಪತಿ (ANEC case- acute necrotizing encephalopathy of childhood) ಎಂಬ ಕಾಯಿಲೆಯು ಎಸ್ಎಸ್ ವೈದ್ಯಕೀಯ ಸಂಶೋಧನೆ ಸಂಸ್ಥೆಯಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖವಾದ ಬಾಲಕನಲ್ಲಿ ಈ ಕಾಯಿಲೆ ಪತ್ತೆಯಾಗಿದೆ.
ಎಸ್ಎಸ್ ಆಸ್ಪತ್ರೆ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ನಿಜಲಿಂಗಪ್ಪ ಕಾಳಪ್ಪನ್ನವರ ನೇತೃತ್ವದ ವೈದ್ಯರ ತಂಡ ಇದನ್ನು ಪತ್ತೆ ಹಚ್ಚಿದೆ. ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಬಾಲಕನಲ್ಲಿ ಪತ್ತೆಯಾಗಿದ್ದು, ಇಂತಹ ಕಾಯಿಲೆ ದೆಹಲಿಯ ಏಮ್ಸ್ನಲ್ಲಿ ವಯಸ್ಕರೊಬ್ಬರಲ್ಲಿ ಪತ್ತೆಯಾಗಿದೆ. ಆದರೆ ಬಾಲಕನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು.
ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ನಿಜಲಿಂಗಪ್ಪ ಕಾಳಪ್ಪನ್ನವರ ಅವರು, ಈ ಕಾಯಿಲೆ ಎಸಿಂಪ್ಟಾಮೆಟೆಕ್ ಕೋವಿಡ್ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ ಪತ್ತೆಯಾಗಿದೆ. ಕಾರಣ ಬಹುತೇಕ ಮಕ್ಕಳಿಗೆ ಕೋವಿಡ್ ಬಂದು ಹೋಗಿರುತ್ತದೆ. ಆದರೆ ಲಕ್ಷಣ ಇರದ ಕಾರನ ಸೂಕ್ತ ಚಿಕಿತ್ಸೆ ತೆಗೆದುಕೊಂಡಿರುವುದಿಲ್ಲ.
ಈ ಕಾಯಿಲೆ ಮೆದುಳಿಗೆ ಸಂಬಂಧಪಟ್ಟ ಕಾಯಿಲೆ. ಇದು ಮಲ್ಟಿ ಸಿಸ್ಟಂ ಇನ್ಫ್ಲಮೇಟರಿ ಸಿಂಡ್ರೋಮ್ (Multisystem Inflammatory Syndrome, MIS-C) ಕಾಯಿಲೆ ಮಾದರಿಯಲ್ಲೇ ಇರುತ್ತದೆ. ಈಗಾಗಲೇ ಎಸ್ಎಸ್ ಆಸ್ಪತ್ರೆಯಲ್ಲಿ MIS-C ಲಕ್ಷಣ ಇರುವ ಆರು ಮಕ್ಕಳಿದ್ದಾರೆ. ಇವರೆಲ್ಲ ಕೋವಿಡ್ ನಿಂದ ಗುಣಮುಖರಾದವರೇ ಆಗಿದ್ದಾರೆ ಎಂದು ಹೇಳಿದ್ದಾರೆ.
ಕಾಯಿಲೆ ಪತ್ತೆಯಾದ ತಕ್ಷಣ ಮಕ್ಕಳಿಗೆ ಕೆಲ ವೈದ್ಯಕೀಯ ಪರೀಕ್ಷೆ ಎಂಆರ್ ಐ, ಕೋವಿಡ್ ಟೆಸ್ಟ್ ಹಾಗೂ ಯಾವ ಅಂಗದ ಮೇಲೆ ದಾಳಿ ಮಾಡಿದೆ ಆ ಅಂಗಕ್ಕೆ ಪ್ರತ್ಯೇಕ ಚಿಕಿತ್ಸೆ ನೀಡಬೇಕಾಗುತ್ತದೆ. ಇದಕ್ಕೆ ಇಮ್ಯುನೋಗ್ಲೋಬುಲಿನ್ ಔಷಧ ನೀಡಲಾಗುತ್ತದೆ. ಈ ಔಷಧಿಗೆ ಐದು ಗ್ರಾಂಗೆ 14 ಸಾವಿರ ರೂಪಾಯಿ ತಗಲುತ್ತದೆ.
ದೇಶದಲ್ಲಿ ಯಾವುದೇ ಕಾಯಿಲೆ ಕಾಣಿಸಿಕೊಂಡರೂ ಅದು ಇಂಡಿಯನ್ ಮೆಡಿಕಲ್ ಜರ್ನಲ್ನಲ್ಲಿ ದಾಖಲಾಗುತ್ತದೆ. ಮಕ್ಕಳಿಗೆ ಎನೆಕ್ ಕಾಯಿಲೆ ಬಂದಿದ್ದು ದಾಖಲಾಗಿಲ್ಲ. ಹೀಗಾಗಿ ಇದೇ ಮೊದಲು ಮಕ್ಕಳಲ್ಲಿ ಕಾಣಿಸಿಕೊಂಡ ಕಾಯಿಲೆಯಾಗಿದೆ ಎಂದು ಹೇಳಬಹುದು ಎಂದು ಅವರು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ