ಶಿವಮೊಗ್ಗ: ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಲ್ಲಿ ಮೊದಲ ನಾಗರಿಕ ಸಂಚಾರ ವಿಮಾನ ಲ್ಯಾಂಡ್ ಆಗಿದೆ. ಈ ಮೂಲಕ ಮಲೆನಾಡ ಹೆಬ್ಬಾಗಿಲಲ್ಲಿ ಸಾರ್ವಜನಿಕರಿಗೆ ವಿಮಾನ ಸೌಲಭ್ಯ ಅಧಿಕೃತವಾಗಿ ಆರಂಭವಾಗಿದೆ.
ಇಂದು ಗುರುವಾರ ಬೆಳಗ್ಗೆ 9:50ಕ್ಕೆ ಇಂಡಿಗೋ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟ ವಿಮಾನ 10:45 ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ತಲುಪಿದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶಿವಮೊಗ್ಗಕ್ಕೆ ಮೊದಲ ವಿಮಾನದಲ್ಲೇ ಆಗಮಿಸಿದ್ದಾರೆ. ಸಚಿವ ಎಂ.ಬಿ.ಪಾಟೀಲ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಬಿ.ವೈ.ವಿಜಯೇಂದ್ರ, ಗೋಪಾಲಕೃಷ್ಣ ಬೇಳೂರು, ಭಾರತಿ ಶೆಟ್ಟಿ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಹರತಾಳು ಹಾಲಪ್ಪ ಸೇರಿದಂತೆ ಪ್ರಮುಖರು ಅವರೊಂದಿಗೆ ಈ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.
ಇಂಡಿಗೋ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನ ಸೇವೆಯನ್ನು ಪ್ರಾರಂಭಿಸಿದೆ ಮತ್ತು ದಿನಕ್ಕೆ ಒಮ್ಮೆ ಹೋಗಿ ಬರುತ್ತದೆ. 72 ಆಸನಗಳ ವಿಮಾನವು ಮೊದಲ ದಿನದಲ್ಲಿ ಸಂಪೂರ್ಣವಾಗಿ ಭರ್ತಿಯಾಗಿತ್ತು.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಯಡಿಯೂರಪ್ಪ ಜನ್ಮದಿನದಂದು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ಈ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲಾಗಿದೆ. ಆರಂಭದಲ್ಲಿ ಯಡಿಯೂರಪ್ಪ ಅವರ ಹೆಸರನ್ನು ಇಡಬೇಕು ಎಂದು ಹಿಂದಿನ ಬಿಜೆಪಿ ಸರ್ಕಾರ ತೀರ್ಮಾನಿಸಿತ್ತು. ಆದರೆ, ಯಡಿಯೂರಪ್ಪ ಅವರು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ಕುವೆಂಪು ಹೆಸರನ್ನು ಇಡುವಂತೆ ಸೂಚಿಸಿದ್ದರು. ಅಂತಿಮವಾಗಿ ಕುವೆಂಪು ವಿಮಾನ ನಿಲ್ದಾಣ ಎಂದು ಹೆಸರಿಡಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ